Homeಅಂತಾರಾಷ್ಟ್ರೀಯಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗಿ : ಅನಿವಾಸಿ ಭಾರತೀಯರಿಗೆ ಕುಮಾರಸ್ವಾಮಿ ಕರೆ

ಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗಿ : ಅನಿವಾಸಿ ಭಾರತೀಯರಿಗೆ ಕುಮಾರಸ್ವಾಮಿ ಕರೆ

ಅಮೆರಿಕ, ಸೆ.6- ಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗಿ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ತಂತ್ರಜ್ಞಾನ, ಅನುಭವ ಹಾಗೂ ಪರಿಣತಿಯನ್ನು ಭಾರತದ ಅಭಿವೃದ್ಧಿಗೆ ಬಳಸಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ ಬಿಸಿನೆಸ್‌ ಫೋರಂ-2026 ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ‘ಮೇಕ್‌ ಇನ್‌ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ’ದಂತಹ ಯೋಜನೆಗಳ ಮೂಲಕ ವಿಕಸಿತ ಭಾರತದ ಗುರಿ ಸಾಧಿಸಲು ದೇಶದಲ್ಲಿ ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ ಎಂದು ಹೇಳಿದರು.

ವಿದೇಶದಲ್ಲಿರುವ ಭಾರತೀಯರು ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ದೇಶದ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡಬೇಕು. ತಮ್ಮ ತಂತ್ರಜ್ಞಾನ, ಜ್ಞಾನ ಮತ್ತು ಜಾಗತಿಕ ಅನುಭವವನ್ನು ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಬಳಸಬೇಕು ಎಂದು ಅವರು ಮನವಿ ಮಾಡಿದರು.

ಉತ್ಪಾದನೆ, ಹಸಿರು ಇಂಧನಕ್ಕೆ ಉತ್ತೇಜನ

ದೇಶದ ಕೈಗಾರಿಕಾ ಪ್ರಗತಿಗಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ವಿವರಿಸಿದರು. ₹10,900 ಕೋಟಿ ವೆಚ್ಚದ ಪಿಎಂ ಇ-ಡ್ರೈವ್‌ ಯೋಜನೆ, ಉತ್ಪಾದನಾ ಉತ್ತೇಜನ ಯೋಜನೆಗೆ ₹25,938 ಕೋಟಿ ಹಾಗೂ 50 ಜಿಗಾವಾಟ್‌ ಸಾಮರ್ಥ್ಯದ ಎಸಿಸಿ ಬ್ಯಾಟರಿ ಕಾರ್ಯಕ್ರಮಕ್ಕೆ ₹18,100 ಕೋಟಿ ಮೀಸಲಿಡಲಾಗಿದೆ. ವಿರಳ ಖನಿಜಗಳ ಅಭಿವೃದ್ಧಿಗೂ ₹7,280 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತವು ಇಂದು ವಿಶ್ವದ ಪ್ರಮುಖ ಉಕ್ಕು ಉತ್ಪಾದಕ ಹಾಗೂ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. 2030ರ ವೇಳೆಗೆ ವಾರ್ಷಿಕ 300 ಮಿಲಿಯನ್‌ ಟನ್‌ ಉಕ್ಕು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಗುರಿ ಸಾಧನೆಗಾಗಿ ಉಕ್ಕು ಉತ್ಪಾದನೆಗೆ ₹6,322 ಕೋಟಿ ಮೊತ್ತದ ಉತ್ಪಾದನಾ ಉತ್ತೇಜನ ಯೋಜನೆ ರೂಪಿಸಲಾಗಿದೆ. ಜತೆಗೆ 2070ರ ವೇಳೆಗೆ ಉಕ್ಕು ಕ್ಷೇತ್ರದಲ್ಲಿ ನಿವ್ವಳ ಶೂನ್ಯ ಕಾರ್ಬನ್‌ ಹೊರಸೂಸುವಿಕೆ ಸಾಧಿಸುವ ಗುರಿಯನ್ನೂ ಭಾರತ ಹೊಂದಿದೆ ಎಂದು ಅವರು ತಿಳಿಸಿದರು.

ಭಾರತದ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದ್ದು, ಜಾಗತಿಕ ಮಟ್ಟದಲ್ಲಿ ಪರಿಣತಿ ಹೊಂದಿರುವ ಭಾರತೀಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

RELATED ARTICLES
spot_img

Latest News