Homeರಾಷ್ಟ್ರೀಯಅಮೃತಸರ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್‌ಗಳ ಹಾರಾಟ

ಅಮೃತಸರ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್‌ಗಳ ಹಾರಾಟ

ಅಮೃತಸರ, ಸೆ.7- ಅಮೃತಸರದ ಶ್ರೀ ಗುರು ರಾಮ್‌ ದಾಸ್‌ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣಾ ಪ್ರದೇಶ ಹಾಗೂ ರನ್‌ವೇ ಸಮೀಪ 2ರಿಂದ 4 ಅನುಮಾನಾಸ್ಪದ ಡ್ರೋನ್‌ಗಳು ಅಥವಾ ಹಾರುವ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.

ರಾಜಲ ಗ್ರಾಮದ ದಿಕ್ಕಿನಿಂದ ವಿಮಾನ ನಿಲ್ದಾಣದತ್ತ ಬಂದಿರುವ ಈ ಅನುಮಾನಾಸ್ಪದ ಹಾರುವ ವಸ್ತುಗಳು ರನ್‌ವೇ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಕೆಲವು ನಿಮಿಷಗಳ ಕಾಲ ಸುಳಿದಾಡಿರುವುದು ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಒಳಬರುವ ಏಳು ವಿಮಾನಗಳ ಮಾರ್ಗವನ್ನು ಬದಲಾಯಿಸಿ ದೆಹಲಿ ಹಾಗೂ ಚಂಡೀಗಢ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಘಟನೆಯ ಬೆನ್ನಲ್ಲೇ ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಗಡಿಗೆ ಸಮೀಪವಿರುವುದರಿಂದ ಹೆಚ್ಚಿನ ಭದ್ರತೆ

ಅಮೃತಸರ ವಿಮಾನ ನಿಲ್ದಾಣವು ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಿಂದ ವೈಮಾನಿಕವಾಗಿ 30 ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿದೆ. ಹೀಗಾಗಿ ಗಡಿ ಪ್ರದೇಶಕ್ಕೆ ಸಮೀಪವಿರುವ ಈ ವಿಮಾನ ನಿಲ್ದಾಣವನ್ನು ಭದ್ರತಾ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ.

ಗಡಿ ಭಾಗದಲ್ಲಿ ಈ ಹಿಂದೆಯೂ ಅನುಮಾನಾಸ್ಪದ ಡ್ರೋನ್‌ ಚಟುವಟಿಕೆಗಳು ವರದಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲೂ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ನುಸುಳುವಿಕೆ ನಡೆಸಿರುವ ಶಂಕೆಗಳು ವ್ಯಕ್ತವಾಗಿದ್ದವು.

ಅಮೃತಸರ ವಿಮಾನ ನಿಲ್ದಾಣದ ಸಮೀಪ ಇದೀಗ ಅನುಮಾನಾಸ್ಪದ ಡ್ರೋನ್‌ಗಳು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಘಟನೆಗೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆಗಳು ತೀವ್ರ ತನಿಖೆ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಹಾರುವ ವಸ್ತುಗಳ ಸ್ವರೂಪ ಮತ್ತು ಅವುಗಳ ಮೂಲದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

RELATED ARTICLES
spot_img

Latest News