Homeಅಂತಾರಾಷ್ಟ್ರೀಯವಿಶ್ವಸಂಸ್ಥೆಯ ನಕ್ಷೆ ನಿರ್ಣಯ ; ಕಾಶ್ಮೀರ ವಿಚಾರ ಕೆದಕಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ವಿಶ್ವಸಂಸ್ಥೆಯ ನಕ್ಷೆ ನಿರ್ಣಯ ; ಕಾಶ್ಮೀರ ವಿಚಾರ ಕೆದಕಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನವದೆಹಲಿ/ಇಸ್ಲಾಮಾಬಾದ್‌, ಸೆ.7- ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಜಾಗತಿಕ ನಕ್ಷೆಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ನಿರ್ಣಯವನ್ನು ಭಾರತ ಬೆಂಬಲಿಸಿದ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಆಧಾರರಹಿತ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದೆ.

ವಿಶ್ವ ಭೂಪಟದಲ್ಲಿ ದೇಶಗಳು ಹಾಗೂ ಭೂಖಂಡಗಳ ಗಾತ್ರವನ್ನು ಹೆಚ್ಚು ಸಮಾನವಾಗಿ ಪ್ರತಿನಿಧಿಸುವ ಉದ್ದೇಶ ಹೊಂದಿರುವ ಈ ನಿರ್ಣಯಕ್ಕೂ ರಾಷ್ಟ್ರೀಯ ಗಡಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಆದರೂ ಪಾಕಿಸ್ತಾನ ಈ ವಿಷಯವನ್ನು ಕಾಶ್ಮೀರ ವಿವಾದದೊಂದಿಗೆ ತಳುಕು ಹಾಕಲು ಮುಂದಾಗಿದೆ.

ಸೆ.4ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟೋಗೊ ಪ್ರಾಯೋಜಿತ ‘ಜಾಗತಿಕ ನಕ್ಷೆಯ ಪ್ರಾತಿನಿಧ್ಯವನ್ನು ಮರುಸಮತೋಲನಗೊಳಿಸುವುದು’ ಎಂಬ ಶೀರ್ಷಿಕೆಯ ನಿರ್ಣಯ ಮಂಡಿಸಲಾಯಿತು. ಭೂಖಂಡಗಳ ಸಾಪೇಕ್ಷ ಗಾತ್ರವನ್ನು ಹೆಚ್ಚು ನಿಖರವಾಗಿ ಬಿಂಬಿಸುವ ಸಮಾನ-ಪ್ರದೇಶದ ನಕ್ಷೆಗಳ ಬಳಕೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಭಾರತದ ಸ್ಪಷ್ಟ ನಿಲುವು

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಕುರಿತು ದೇಶದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ಕಾಶ್ಮೀರವನ್ನು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿವಾದಿತ ಪ್ರದೇಶವೆಂದು ಬಣ್ಣಿಸಿ ತನ್ನ ಹಳೆಯ ನಿಲುವನ್ನೇ ಪುನರುಚ್ಚರಿಸಿದೆ. ವಿಶ್ವಸಂಸ್ಥೆಯ ನಕ್ಷೆ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ತಾಂತ್ರಿಕ ನಿರ್ಣಯವನ್ನು ಕಾಶ್ಮೀರ ವಿಚಾರದೊಂದಿಗೆ ತಳುಕು ಹಾಕಿರುವ ಪಾಕಿಸ್ತಾನದ ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ವಾಗ್ವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

RELATED ARTICLES
spot_img

Latest News