ಬೆಂಗಳೂರು, ಸೆ.7- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಖಾಸಗೀಕರಣಗೊಳ್ಳುತ್ತಿದೆ ಹಾಗೂ ಸಂಸ್ಥೆಯ ಪಾತ್ರವನ್ನು ಕಡಿಮೆ ಮಾಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳು ಹಾಗೂ ಊಹಾಪೋಹಗಳನ್ನು ಇಸ್ರೋ ಸಂಪೂರ್ಣವಾಗಿ ತಳ್ಳಿಹಾಕಿದೆ. ಮುಂದುವರಿದ ಬಾಹ್ಯಾಕಾಶ ಸಂಶೋಧನೆ, ಉನ್ನತ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಕಾರ್ಯತಂತ್ರದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಇಸ್ರೋದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
2020ರ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಹಾಗೂ ಭಾರತೀಯ ಬಾಹ್ಯಾಕಾಶ ನೀತಿ-2023ರ ಅಡಿಯಲ್ಲಿ ಖಾಸಗಿ ವಲಯ ಮತ್ತು ನವೋದ್ಯಮಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿರುವುದು ಇಸ್ರೋದ ಪಾತ್ರವನ್ನು ಕುಗ್ಗಿಸುವ ಉದ್ದೇಶದಿಂದಲ್ಲ. ಬದಲಾಗಿ, ದೇಶದ ಒಟ್ಟಾರೆ ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯವನ್ನು ವಿಸ್ತರಿಸುವ ಹಾಗೂ ಬಾಹ್ಯಾಕಾಶ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ.
ಪ್ರಬುದ್ಧ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಕೈಗಾರಿಕೆಗಳಿಗೆ ಹಸ್ತಾಂತರಿಸುವುದರಿಂದ ಇಸ್ರೋ ಆ ಕ್ಷೇತ್ರಗಳಿಂದ ಹಿಂದೆ ಸರಿಯುತ್ತಿದೆ ಎಂಬ ಅರ್ಥವಲ್ಲ. ತಂತ್ರಜ್ಞಾನ ವರ್ಗಾವಣೆ ಮೂಲಕ ವಾಣಿಜ್ಯೀಕರಣ ಹಾಗೂ ದೊಡ್ಡ ಪ್ರಮಾಣದ ಉತ್ಪಾದನೆಗೆ ಅವಕಾಶ ಕಲ್ಪಿಸುವುದೇ ಇದರ ಉದ್ದೇಶವಾಗಿದೆ.
ಗಗನಯಾನದಿಂದ ಚಂದ್ರಯಾನವರೆಗೆ
ಮುಂದಿನ ದಿನಗಳಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನ, 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040ರ ವೇಳೆಗೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಯೋಜನೆ ಹಾಗೂ ಆಳವಾದ ಬಾಹ್ಯಾಕಾಶ ಪರಿಶೋಧನೆಯಂತಹ ಮಹತ್ವಾಕಾಂಕ್ಷೆಯ ಯೋಜನೆಗಳತ್ತ ಇಸ್ರೋ ತನ್ನ ಗಮನವನ್ನು ಕೇಂದ್ರೀಕರಿಸಲಿದೆ.
ಭಾರತದ ಬಾಹ್ಯಾಕಾಶ ಆರ್ಥಿಕತೆ ಪ್ರಸ್ತುತ ಸುಮಾರು 8.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದ್ದು, 2033ರ ವೇಳೆಗೆ ಅದನ್ನು 44 ಬಿಲಿಯನ್ ಡಾಲರ್ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಈ ಪ್ರಮಾಣದ ಬೆಳವಣಿಗೆಯನ್ನು ಕೇವಲ ಸರ್ಕಾರಿ ಸಂಪನ್ಮೂಲಗಳ ಮೂಲಕ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಬಂಡವಾಳ, ಉದ್ಯಮಗಳು ಹಾಗೂ ನವೋದ್ಯಮಗಳ ಸಹಭಾಗಿತ್ವ ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇಸ್ರೋ ತನ್ನ ವೈಜ್ಞಾನಿಕ ನಾಯಕತ್ವವನ್ನು ಮುಂದುವರಿಸುವುದರ ಜತೆಗೆ ಖಾಸಗಿ ವಲಯದ ಸಹಯೋಗದ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ವಿಷನ್-2047 ಗುರಿಯತ್ತ ಭಾರತದ ಪ್ರಗತಿಗೆ ವೇಗ ನೀಡಲಿದೆ.
EOS-05 ಕಕ್ಷೆ ಹೆಚ್ಚಿಸುವ ಕಾರ್ಯಾಚರಣೆ ಯಶಸ್ವಿ
ಇದೇ ವೇಳೆ, ಇಸ್ರೋದ ಇತ್ತೀಚಿನ ಭೂ ವೀಕ್ಷಣಾ ಉಪಗ್ರಹ EOS-05ರ ಎರಡನೇ ಕಕ್ಷೆ ಹೆಚ್ಚಿಸುವ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಉಪಗ್ರಹದ ಕಕ್ಷೆಯನ್ನು ಹಂತ ಹಂತವಾಗಿ ಹೆಚ್ಚಿಸುವ ಪ್ರಕ್ರಿಯೆಯು ಬಾಹ್ಯಾಕಾಶ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದು, ಮುಂದಿನ ಹಂತಗಳಿಗೂ ಸಿದ್ಧತೆ ನಡೆಸಲಾಗುತ್ತಿದೆ.
