Homeಅಂತಾರಾಷ್ಟ್ರೀಯಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ 9 ತುಂಡುಗಳಾಗಿ ಪತ್ತೆ : ಪತ್ನಿ, ಮಗ ನಾಪತ್ತೆ

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ 9 ತುಂಡುಗಳಾಗಿ ಪತ್ತೆ : ಪತ್ನಿ, ಮಗ ನಾಪತ್ತೆ

ಉಡುಪಿ, ಸೆ.23- ಕರ್ನಾಟಕದ ಉಡುಪಿ ಜಿಲ್ಲೆಯ ಆಲ್ವಿನ್‌ ಪ್ರಕಾಶ್‌ ಕುಂದರ್‌ ಅವರು ಯುಎಇಯ ಶಾರ್ಜಾದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ತನಿಖೆ ಕುತೂಹಲ ಮೂಡಿಸಿದೆ. ಪ್ರಕಾಶ್‌ ಅವರ ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ತುಂಬಲಾಗಿತ್ತು ಎಂದು ಅವರ ಸಹೋದರ ಅನಿಲ್‌ ಪ್ರಶಾಂತ್‌ ಕುಂದರ್‌ ತಿಳಿಸಿದ್ದಾರೆ.

ಪ್ರಕಾಶ್‌ ಅವರು ಸುಮಾರು 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದರು. ಪತ್ನಿ ಟೀನಾ ಕುಂದರ್‌ ಹಾಗೂ 10ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರನೊಂದಿಗೆ ಶಾರ್ಜಾದಲ್ಲಿ ವಾಸಿಸುತ್ತಿದ್ದರು. ಟೀನಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಜು.20ರ ಸುಮಾರಿಗೆ ಪ್ರಕಾಶ್‌ ಅವರನ್ನು ಸಂಪರ್ಕಿಸಲು ಕುಟುಂಬಸ್ಥರು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸದೆ ಸಂದೇಶದ ಮೂಲಕ ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದರು. ಸಾಮಾನ್ಯವಾಗಿ ಧ್ವನಿ ಸಂದೇಶಗಳ ಮೂಲಕ ಮಾತನಾಡುತ್ತಿದ್ದ ಪ್ರಕಾಶ್‌ ಅವರ ಈ ವರ್ತನೆ ಕುಟುಂಬಸ್ಥರಲ್ಲಿ ಅನುಮಾನ ಮೂಡಿಸಿತ್ತು. ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕುಟುಂಬದವರು ಶಾರ್ಜಾದಲ್ಲಿದ್ದ ಪ್ರಕಾಶ್‌ ಅವರ ಪರಿಚಿತರಿಗೆ ಮಾಹಿತಿ ನೀಡಿದ ಬಳಿಕ, ಅವರು ವಾಸಿಸುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಲಾಯಿತು. ಆರಂಭದಲ್ಲಿ ಪ್ರಕಾಶ್‌ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿಯಿಂದ ಕುಟುಂಬಕ್ಕೆ ಮಾಹಿತಿ ದೊರೆತಿತ್ತು. ಆದರೆ ಪಾಸ್‌ಪೋರ್ಟ್‌ ಪರಿಶೀಲಿಸಿದಾಗ ಅವರು ಭಾರತಕ್ಕೆ ಮರಳಿಲ್ಲ ಎಂಬುದು ತಿಳಿದುಬಂದಿದ್ದು, ಬಳಿಕ ನಾಪತ್ತೆ ದೂರು ದಾಖಲಿಸಲಾಯಿತು.

ಹುಡುಕಾಟದ ವೇಳೆ ಒಮಾನ್‌ ಕಡೆಗೆ ತೆರಳುವ ಮಾರ್ಗದಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಪ್ರಕಾಶ್‌ ಅವರ ಮೃತದೇಹ ಪತ್ತೆಯಾಗಿದೆ. ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ಇರಿಸಲಾಗಿತ್ತು ಎಂದು ಕುಟುಂಬ ತಿಳಿಸಿದೆ. ಬಳಿಕ ಅವಶೇಷಗಳು ಪ್ರಕಾಶ್‌ ಅವರದ್ದೇ ಎಂದು ಗುರುತಿಸಲಾಯಿತು.

ಪ್ರಕಾಶ್‌ ಅವರ ಸಾವಿನ ನಂತರ ಅವರ ಪತ್ನಿ ಟೀನಾ ಮತ್ತು ಪುತ್ರ ಕೂಡ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಅವರು ಭಾರತಕ್ಕೆ ತೆರಳಿರುವ ಸಾಧ್ಯತೆಯ ಬಗ್ಗೆ ಕೆಲವು ವರದಿಗಳು ಹೇಳಿದ್ದರೂ, ಅವರ ಪ್ರಸ್ತುತ ಸ್ಥಳದ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಪತ್ನಿ ಟೀನಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಕೆಲವು ವರದಿಗಳಲ್ಲಿ ವ್ಯಕ್ತವಾಗಿವೆ. ಆದರೆ ಅವರ ಪಾತ್ರ ಅಥವಾ ಕೊಲೆಗೆ ಕಾರಣವಾಗಿರುವ ಯಾವುದೇ ಆರೋಪ ಈವರೆಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಪ್ರಕಾಶ್‌ ಮತ್ತು ಟೀನಾ ನಡುವೆ ಯಾವುದೇ ವೈವಾಹಿಕ ಕಲಹದ ಬಗ್ಗೆ ಕುಟುಂಬಕ್ಕೆ ಮಾಹಿತಿ ಇಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಶಾರ್ಜಾ ಅಧಿಕಾರಿಗಳು ಪ್ರಕರಣದ ತನಿಖೆ ಮುಂದುವರಿಸಿದ್ದು, ಕೊಲೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಈವರೆಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಪ್ರಕಾಶ್‌ ಅವರ ಮೃತದೇಹವನ್ನು ಭಾರತಕ್ಕೆ ತರಲು ಯುಎಇಯಲ್ಲಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವುದನ್ನು ಕುಟುಂಬ ಕಾಯುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್‌ ಅವರ ಸಹೋದರ ಅನಿಲ್‌ ಅವರು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಶಾರ್ಜಾ ಪೊಲೀಸರಿಂದ ಅಧಿಕೃತ ಮಾಹಿತಿಗಾಗಿ ಉಡುಪಿ ಪೊಲೀಸರು ಕಾಯುತ್ತಿದ್ದಾರೆ.

RELATED ARTICLES
spot_img

Latest News