ಹನೂರು,ಸೆ.23-ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ಮೈಸೂರಿನ ಚಾಮರಾಜೇಂದ್ರ ಮಗಾಲಯಕ್ಕೆ ಬಿಡಲಾಯಿತು. ಹನೂರು ಬಫರ್ ವಲಯದ ಅರಕನ ಹಳ್ಳದ ಬಳಿ ಮರಿಯಾನೆ ತಾಯಿಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತ್ತು.
ಅಜ್ಜಿಪುರ ರಸ್ತೆಯಲ್ಲಿ ಓಡಾಡುತ್ತಿದ್ದ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಂಬಾಲಿಸಿ ರಾತ್ರಿಯಿಡೀ ಗಮನಿಸಿದ್ದರು. ಆದರೆ ತಾಯಿ ಆನೆ ಬರದಿದ್ದರಿಂದ ಮರಿಯನ್ನು ಕರೆತಂದು ನರ್ಸರಿಯಲ್ಲಿ ಆರೈಕೆ ಮಾಡಿ ಬಳಿಕ ಮೈಸೂರಿನ ಮಗಾಲಯಕ್ಕೆ ಬಿಟ್ಟರು.
ಇದು ಅಂದಾಜು ಒಂದು ತಿಂಗಳ ಮರಿಯಾಗಿದ್ದು, ಸ್ವಲ್ಪ ಬಳಲಿದಂತೆ ಕಾಣುತ್ತಿದೆ. ನಮಲ್ಲಿ ಅದಕ್ಕೆ ಸಮರ್ಪಕ ಆರೈಕೆ ವ್ಯವಸ್ಥೆ ಇಲ್ಲದ ಕಾರಣ ಮಗಾಲಯಕ್ಕೆ ಬಿಡಲಾಗಿದೆ. ಅಲ್ಲಿ ಸೂಕ್ತ ಆರೈಕೆ ದೊರೆಲಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಹೊಸೂರು ತಿಳಿಸಿದರು.
