ಬೆಂಗಳೂರು, ಸೆ.23- ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ವಂದೇ ಮಾತರಂ ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಉತ್ತರ ಕೇಳಿದೆ. 1986ರ ಬಿಜೋಯ್ ಇಮ್ಯಾನುಯೆಲ್ ತೀರ್ಪಿನಲ್ಲಿನ ತತ್ವಗಳನ್ನು ಪರಿಗಣಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸುಪ್ರೀಂ ಕೋರ್ಟ್‌ನ ನಿಲುವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ದೇಶಭಕ್ತಿ ಎಂದರೆ ಯಾರನ್ನಾದರೂ ಒಂದು ಹಾಡನ್ನು ಕಡ್ಡಾಯವಾಗಿ ಹಾಡುವಂತೆ ಒತ್ತಾಯಿಸುವುದಲ್ಲ. ಸಂವಿಧಾನವನ್ನು ಗೌರವಿಸುವುದು, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಹಾಗೂ ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವುದೂ ದೇಶಭಕ್ತಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ವಂದೇ ಮಾತರಂ ಕುರಿತು ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಗೌರವಿಸುವ ಮಾರ್ಗವನ್ನು ರೂಪಿಸಿದ್ದರು. ಆದರೆ ಆ ಐತಿಹಾಸಿಕ ಒಮ್ಮತವನ್ನು ಬದಿಗೊತ್ತಿ, ಸಂಪೂರ್ಣ ಆರು ಚರಣಗಳನ್ನು ಅಧಿಕೃತವಾಗಿ ಹಾಡಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.
ವಂದೇ ಮಾತರಂ ಹಾಡುವುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ಹಾಡನ್ನು ಗೌರವಿಸುವ ಹೆಸರಿನಲ್ಲಿ ಸಂವಿಧಾನವನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ದೇಶಭಕ್ತಿಯ ಪ್ರಮಾಣಪತ್ರವನ್ನು ಬಿಜೆಪಿಯಿಂದ ಪಡೆಯಬೇಕಾದ ಪರಿಸ್ಥಿತಿ ದೇಶದಲ್ಲಿಲ್ಲ. ದೇಶವನ್ನು ಪ್ರೀತಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುವಂತೆ, ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಹಕ್ಕು ಕೂಡ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿರುವ ಅವರು, ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪೂರ್ಣ ವಂದೇ ಮಾತರಂ ಹಾಡಲು ಮುಂದಾದರು ಎಂದು ತಿಳಿಸಿದ್ದಾರೆ.
ಆಡಳಿತ ಪಕ್ಷದ ಸದಸ್ಯರು ಎರಡು ಚರಣಗಳ ಬಳಿಕ ಸಂವಿಧಾನದ ಪೀಠಿಕೆಯನ್ನು ಓದಿದ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಪೂರ್ಣ ಹಾಡನ್ನು ಮುಂದುವರಿಸಿದರು ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮ ವರದಿಗಳಲ್ಲಿಯೂ ಉಲ್ಲೇಖಿಸಲಾಗಿದೆ.
ಬಿಜೆಪಿ ಸದಸ್ಯರು ಮುದ್ರಿತ ಪ್ರತಿಗಳನ್ನು ಹಿಡಿದು ವಂದೇ ಮಾತರಂ ಹಾಡಿರುವುದನ್ನೂ ಅವರು ಟೀಕಿಸಿದ್ದಾರೆ. ಪೂರ್ಣ ಆವೃತ್ತಿಯನ್ನು ಹಾಡಬೇಕು ಎಂದು ವಿಧಾನಸಭೆಯಲ್ಲಿ ರಾಜಕೀಯ ಹೋರಾಟ ನಡೆಸುವವರು ಹಾಡಿನ ಸಂಪೂರ್ಣ ಸಾಹಿತ್ಯವನ್ನು ಬಾಯಿಪಾಠ ಮಾಡಿಕೊಂಡಿಲ್ಲ ಎಂಬುದು ವಿಪರ್ಯಾಸ ಎಂದು ಹೇಳಿದ್ದಾರೆ.
ಮುದ್ರಿತ ಪ್ರತಿಯನ್ನು ನೋಡಿ ಹಾಡಿದರೂ ಸರಿಯಾಗಿ ಹಾಡಲು ಸಾಧ್ಯವಾಗದಿರುವುದು ಮತ್ತೊಂದು ವೈರುಧ್ಯ ಎಂದು ವ್ಯಂಗ್ಯವಾಡಿದ್ದಾರೆ. ಒಂದು ಹಾಡನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು, ಅದೇ ಹಾಡನ್ನು ಸರಿಯಾಗಿ ಹಾಡಲು ಸಾಧ್ಯವಾಗದಿರುವುದಕ್ಕಿಂತ ದೊಡ್ಡ ರಾಜಕೀಯ ವೈರುಧ್ಯ ಮತ್ತೊಂದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು?
ವಂದೇ ಮಾತರಂನ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪ್ರಶ್ನಿಸಿ ಸಂಗೀತಗಾರ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಪರಿಶೀಲಿಸಿದೆ. ವಂದೇ ಮಾತರಂನ ಎರಡು ಅಥವಾ ಆರು ಚರಣಗಳನ್ನು ಹಾಡಬೇಕೇ ಎಂಬ ಪ್ರಶ್ನೆಯನ್ನು ತಾನು ನಿರ್ಧರಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದು, ಅದರ ಬದಲಾಗಿ ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ಹಾಡಲು ನಿರಾಕರಿಸುವವರ ವಿರುದ್ಧ ಕ್ರಿಮಿನಲ್ ಪರಿಣಾಮ ವಿಧಿಸಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ಉತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.
1986ರ ಬಿಜೋಯ್ ಇಮ್ಯಾನುಯೆಲ್ ಪ್ರಕರಣದಲ್ಲಿ, ಧಾರ್ಮಿಕ ನಂಬಿಕೆಯ ಕಾರಣದಿಂದ ರಾಷ್ಟ್ರಗೀತೆ ಹಾಡದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿತ್ತು. ನ್ಯಾಯಾಲಯವು ಅವರ ನಂಬಿಕೆ ಮತ್ತು ಆತ್ಮಸಾಕ್ಷಿಗೆ ಸಂಬಂಧಿಸಿದ ಹಕ್ಕುಗಳನ್ನು ರಕ್ಷಿಸಿತ್ತು.
ಈ ಹಿನ್ನೆಲೆಯಲ್ಲಿ, ವಂದೇ ಮಾತರಂ ಹಾಡಲು ಬಾರದ ಬಿಜೆಪಿಗರು ಇದೀಗ ಕನಿಷ್ಠ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಲು ನನಗೆ ಸಮಾಧಾನವಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
