ಮುಂಬೈ, ಸೆ.23- ಐಐಟಿ ಬಾಂಬೆಯ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆಗೆ ಕಾರಣರೆಂದು ಆರೋಪಿಸಲಾದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ. ವಿದ್ಯಾರ್ಥಿ ಸಂಘಟನೆಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹಿಂದೆಯೇ ಅವರನ್ನು ಆಡಳಿತ ವ್ಯವಹಾರಗಳ ಡೀನ್ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.
ಪ್ರಸ್ತುತ ಪ್ರೊಫೆಸರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಅವರು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಹಿಲ್ ವಕೋಡ್ ಅವರು ಸೆ.18ರಂದು ಸಂಜೆ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ವೇಳೆ ಅವರು ಚಾಟ್‌ಜಿಪಿಟಿ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿತ್ತು.
ಸಾಹಿಲ್ ಸಾವಿನ ಬೆನ್ನಲ್ಲೇ ಅವರ ತಾಯಿ ಸೋನಾಲಿ ವಕೋಡ್ ಅವರು ಆಡಳಿತ ಮಂಡಳಿ ಮತ್ತು ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ತಮ್ಮ ಮಗನಿಗೆ ಜಾತಿ ಆಧಾರದ ಮೇಲೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದರು. ‘ನಾನು ಮೇಲ್ಜಾತಿಯವನು, ನೀನು ಕೆಳಜಾತಿಯವನು’ ಎಂದು ನಿಂದಿಸಿ ಅವಮಾನಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಸೆ.13ರಂದು ಹಾಸ್ಟೆಲ್‌ನಲ್ಲಿ ಭೇಟಿಯಾದಾಗಲೂ ಸಾಹಿಲ್ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟಿದ್ದ ಎಂದು ಅವರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಮಗನ ಮೇಲೆ ಹೊರಿಸಲಾದ ನಕಲು ಆರೋಪವನ್ನೂ ನಿರಾಕರಿಸಿರುವ ಅವರು, ಇದಕ್ಕೆ ಸಾಕ್ಷ್ಯ ಒದಗಿಸುವಂತೆ ಸವಾಲು ಹಾಕಿದ್ದಾರೆ.
ಅಧಿಕೃತ ಹೇಳಿಕೆಗೆ ಯು-ಟರ್ನ್ :
ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಅವರು ಚಾಟ್‌ಜಿಪಿಟಿ ಬಳಸಿ ಸಿಕ್ಕಿಬಿದ್ದಿದ್ದರು ಎಂದು ಬಿಡುಗಡೆ ಮಾಡಿದ್ದ ಅಧಿಕೃತ ಹೇಳಿಕೆಯಿಂದ ಐಐಟಿ ಬಾಂಬೆ ಆಡಳಿತ ಮಂಡಳಿ ಹಿಂದೆ ಸರಿದಿದೆ. ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಬಳಿಕ ಸಂಸ್ಥೆಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಪೊಲೀಸ್ ತನಿಖೆ ಪೂರ್ಣಗೊಳ್ಳುವ ಮೊದಲೇ ಈ ರೀತಿಯ ವಿವರ ನೀಡುವುದು ಸರಿಯಲ್ಲವಾಗಿತ್ತು ಎಂದು ಸ್ಪಷ್ಟಪಡಿಸಿದೆ.
ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಆಂತರಿಕ ತನಿಖಾ ಸಮಿತಿಗೆ ಆಗ್ರಹ :
ಐಐಟಿ ಬಾಂಬೆ ಆವರಣದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯದ ದೂರುಗಳ ಹಿನ್ನೆಲೆಯಲ್ಲಿ, ಕ್ಯಾಂಪಸ್‌ನಲ್ಲಿ ನಿಷ್ಪಕ್ಷಪಾತ ಆಂತರಿಕ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ದರ್ಶನ್ ಸೋಲಂಕಿ ಪ್ರಕರಣದ ನೆನಪು :
2023ರಲ್ಲಿ ಐಐಟಿ ಬಾಂಬೆಯ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಅವರ ಸಾವಿಗೆ ಜಾತಿ ತಾರತಮ್ಯ ಕಾರಣ ಎಂದು ಆರೋಪಗಳು ಕೇಳಿಬಂದಿದ್ದವು. ಇದೀಗ ಸಾಹಿಲ್ ವಕೋಡ್ ಅವರ ಸಾವಿನ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿನ ಜಾತಿ ತಾರತಮ್ಯದ ಆರೋಪಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ.
