ಬೆಂಗಳೂರು, ಸೆ.7- ನಗರದ ತ್ಯಾಜ್ಯವನ್ನು ಸಮಸ್ಯೆಯಾಗಿ ಪರಿಗಣಿಸುವ ಬದಲು ಅದನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ ಹಾಗೂ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಅಡಿಯಲ್ಲಿ ಸ್ಥಾಪಿಸಲಾಗಿರುವ ಕಲಿಕಾ ಕೇಂದ್ರವು ‘ಕಸದಿಂದ ರಸ’ ತತ್ವದಡಿ ಕಾರ್ಯನಿರ್ವಹಿಸಲಿದೆ. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ ಹಾಗೂ ಮರುಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಪಾರ್ಟ್ಮೆಂಟ್ ನಿವಾಸಿಗಳು, ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ಹಾಗೂ ಪಾಲಿಕೆ ಪೌರಕಾರ್ಮಿಕರಿಗೆ ತಜ್ಞರಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಈ ಕಾರ್ಯಕ್ಕೆ ಆರ್ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು.
ಕೇಂದ್ರದ ಆವರಣದಲ್ಲಿ ಪ್ರತಿದಿನ 13 ಟನ್ ಹಸಿ ಕಸ ಸಂಸ್ಕರಿಸುವ ಸಾಮರ್ಥ್ಯದ ಬಯೋ-ಮಿಥನೈಸೇಷನ್ ಘಟಕ ಸ್ಥಾಪಿಸಲಾಗಿದೆ. ತ್ಯಾಜ್ಯದಿಂದ ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಸುತ್ತಮುತ್ತಲಿನ ಹೋಟೆಲ್ಗಳಿಗೆ ಇಂಧನವಾಗಿ ಪೂರೈಸಲಾಗುತ್ತಿದೆ. ತ್ಯಾಜ್ಯ ಸಾಗಣೆ ಹಾಗೂ ನಿರ್ವಹಣೆಯನ್ನು ಸುಗಮಗೊಳಿಸಲು 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್ಫರ್ ಸ್ಟೇಷನ್ಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಗಾರ್ಮೆಂಟ್ಸ್ ಹಾಗೂ ಟೈಲರಿಂಗ್ ಅಂಗಡಿಗಳಿಂದ ಹೊರಬರುವ ಬಟ್ಟೆ ಚಿಂದಿಗಳನ್ನು ಮರುಬಳಕೆ ಮಾಡಿ ಬ್ಯಾಗ್, ವ್ಯಾಲೆಟ್, ಬೆಡ್ಶೀಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುವ ಜವಳಿ ಮರುಬಳಕೆ ಘಟಕಕ್ಕೂ ಚಾಲನೆ ನೀಡಲಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ತ್ಯಾಜ್ಯವಾಗಿ ಬಿಸಾಡಲಾಗುತ್ತಿದ್ದ ಥರ್ಮಾಕೋಲ್ ಅನ್ನು ಕರಗಿಸಿ ಗಟ್ಟಿ ಪದಾರ್ಥವನ್ನಾಗಿ ಪರಿವರ್ತಿಸಿ ದೆಹಲಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಫೋಟೋ ಫ್ರೇಮ್, ಕಿವಿಯೋಲೆ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತಿದೆ. ನಿರುಪಯುಕ್ತ ಹಾಸಿಗೆಗಳನ್ನು ನಾರುಗಳಾಗಿ ಪರಿವರ್ತಿಸಿ ಮರುಬಳಕೆ ಮಾಡುವ ವ್ಯವಸ್ಥೆಯನ್ನೂ ಕೇಂದ್ರದಲ್ಲಿ ಕಲ್ಪಿಸಲಾಗಿದೆ.
ಮನೆ ಬಾಗಿಲಲ್ಲೇ ಬಲ್ಕ್ ವೇಸ್ಟ್ ಸಂಗ್ರಹ
ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಬಳಕೆಯಾಗದೆ ಇರುವ ಹಳೆಯ ಸೋಫಾ, ಮಂಚ, ಮೇಜು ಸೇರಿದಂತೆ ಭಾರೀ ಗಾತ್ರದ ತ್ಯಾಜ್ಯವನ್ನು ಮನೆ ಬಾಗಿಲಲ್ಲೇ ಸಂಗ್ರಹಿಸುವ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಎಜಿಎಂ ಶಶಿಕಲಾ, ಬಿಬಿಎಂಪಿ ಮಾಜಿ ಸದಸ್ಯ ಚಂದ್ರಪ್ಪ, ಆರ್ಡಬ್ಲ್ಯುಎ ಪ್ರತಿನಿಧಿಗಳು ಹಾಗೂ ಜಿಬಿಎ ಅಧಿಕಾರಿಗಳು ಉಪಸ್ಥಿತರಿದ್ದರು.
