Homeರಾಜ್ಯರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ವಾಕ್ಸಮರ

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ವಾಕ್ಸಮರ

ಬೆಂಗಳೂರು,ಸೆ.23- ರಾಜ್ಯಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ವಾದ ಇಂದು ವಿಧಾನಸಭೆಯಲ್ಲಿ ಜರುಗಿತು.
ರೈತರ ಸಮಸ್ಯೆ ಮತ್ತು ಸಂಬಂಧಿತ ವಿಷಯಗಳ ಕುರಿತ ವಿಶೇಷ ಚರ್ಚೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡುತ್ತಾ ಬಳ್ಳಾರಿ ಚಲೋ ಪಾದಯಾತ್ರೆ ವಿಚಾರ ಪ್ರಸ್ತಾಪಿಸಿದರು.

ಅದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್‌ ಅರ್ಷದ್‌ ಅವರು ಪ್ರತಿಕ್ರಿಯಿಸಿ, ಬರದ ಬಗ್ಗೆ ಮಾತನಾಡಲಿ, ಪಾದಯಾತ್ರೆ ಅವರ ಪಕ್ಷದ ಕಾರ್ಯಕ್ರಮ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಬಿಜೆಪಿ ಶಾಸಕರು ಹಾಗೂ ವಿಜಯೇಂದ್ರ ಅವರ ಬೆಂಬಲಕ್ಕೆ ನಿಂತು ಮಾತನಾಡಲು ಮುಂದಾದರು. ಆಗ ಕಾಂಗ್ರೆಸ್‌‍ನ ಶಾಸಕರು ಪ್ರತಿಯಾಗಿ ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲದ ಪರಿಸ್ಥಿತಿ ಉಂಟಾಯಿತು.ಪೌರಾಡಳಿತ ಸಚಿವ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಪಾದಯಾತ್ರೆಯನ್ನು ವೈಭವೀಕರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಆಗ ಬಿಜೆಪಿ ಮತ್ತು ಕಾಂಗ್ರೆಸ್‌‍ ಶಾಸಕರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆದು ಸದನದ ಗದ್ದಲ, ಗೊಂದಲದ ಗೂಡಾಯಿತು.ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ಶಾಸಕರಾದ ಆರಗ ಜ್ಞಾನೇಂದ್ರ, ಸತೀಶ್‌ ರೆಡ್ಡಿ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮೊದಲಾದವರು ಎದ್ದು ನಿಂತು ಮಾತನಾಡಲು ಮುಂದಾದರು. ಹಾಗೆಯೇ ಆಡಳಿತ ಪಕ್ಷದ ಶಾಸಕ ಕೋನರೆಡ್ಡಿ, ಸಚಿವರಾದ ಭೈರತಿ ಸುರೇಶ್‌, ಬಾಲಕೃಷ್ಣ, ರಿಜ್ವಾನ್‌ ಅರ್ಷದ್‌, ಚಲುವರಾಯಸ್ವಾಮಿ ಮೊದಲಾದವರು ಮಾತನಾಡಲು ಮುಂದಾದರು. ಆ ಹಂತದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ರಿಜ್ವಾನ್‌ ಅರ್ಷದ್‌ ಮಾತನಾಡಿ, ಪಾದಯಾತ್ರೆ ಸಂದರ್ಭದಲ್ಲಿ ನೀವು ಬರಪರಿಸ್ಥಿತಿ, ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪಿಸದೇ ಸಚಿವರ ರಾಜೀನಾಮೆ ಬಗ್ಗೆ ಒತ್ತಾಯ ಮಾಡಿದ್ದೀರಿ ಎಂದು ಛೇಡಿಸಿದರು.

ಆಗ ಅಶೋಕ್‌ರವರು, ಆರ್ಥಿಕ ಇಲಾಖೆ ಪತ್ರ ಬರೆದಿದೆ. ಒಂದು ನಯಾಪೈಸೆ ಇಲ್ಲ. ಅದು ಏಕೆ ಹೊರಗೆ ಬಂತು? ಮೊದಲು ನಿಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ಬಾಲಕೃಷ್ಣ ಮಾತನಾಡಿ, ಆರ್ಥಿಕ ಸಂಕಷ್ಟದ ವಿಚಾರ ಮಾತನಾಡುವುದು ಸರಿಯಲ್ಲ. ಅವರು ಸತ್ಯ ಹೇಳಿದರೆ ಕುಳಿತುಕೊಳ್ಳಬಹುದು ಎಂದರು.

ವಿಜಯೇಂದ್ರ ಮಾತನಾಡಿ, ಆರ್ಥಿಕ ಇಲಾಖೆ ಪತ್ರ ಬರೆದಿರುವುದರಿಂದ ಚರ್ಚೆ ಮಾಡುತ್ತಿದ್ದೇವೆ. ರಾಜಕೀಯ ಮಾಡುತ್ತಿಲ್ಲ. ಬಿಪಿಎಲ್‌ ಕಾರ್ಡನ್ನು ಕಡಿತ ಮಾಡಲಾಗಿದೆ. ವಿಕಲಚೇತನರ ಮಾಸಾಶನ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸುನೀಲ್‌ಕುಮಾರ್‌ ಮಾತನಾಡಿ, ಆರ್ಥಿಕ ಇಲಾಖೆ ಪತ್ರದ ಬಗ್ಗೆ ಒಂದು ಸಾಲಿನಲ್ಲಿ ಹೇಳುವುದಾದರೆ ದಿವಾಳಿ ಸರ್ಕಾರದ ಕುಬೇರ ಮುಖ್ಯಮಂತ್ರಿ ಎಂದಾಗುತ್ತದೆ. ಅಷ್ಟು ಅರ್ಥ ಮಾಡಿಕೊಂಡರೆ ನಾಲ್ಕು ಪುಟ ಓದುವ ಅಗತ್ಯವಿಲ್ಲ ಎಂದರು.

ಸಚಿವ ನರೇಂದ್ರಸ್ವಾಮಿಯವರು ಮಾತನಾಡಿ, ಒಂದು ವಿಚಾರದ ಬಗ್ಗೆ ಮಾತ್ರ ಪ್ರಸ್ತಾಪವಾಗಿದೆ ಎಂದು ಹೇಳಲು ಮುಂದಾದರು. ಗದ್ದಲದಲ್ಲಿ ಏನು ಹೇಳುತ್ತಿದ್ದಾರೆಂಬುದೇ ಕೇಳಿಸಲಿಲ್ಲ.
ಬಾಲಕೃಷ್ಣ ಅವರು ಮತ್ತೆ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಪಿಂಚಣಿಯನ್ನೂ ಕೊಡುತ್ತಿದ್ದೇವೆ. ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ನಿಲ್ಲಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಅಶೋಕ್‌ ಮಾತನಾಡಿ, ಹಣಕಾಸು ಇಲಾಖೆ ಬರೆದಿರುವ ಪತ್ರ ಗೊತ್ತಿಲ್ಲವೇ? ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಬಂದಾಗ ದಿವಾಳಿಯಾಗಿದೆ ಎಂಬ ಪತ್ರ ಹೊರಬಂದಿದೆ. ಹಾಗಿದ್ದರೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸರ್ಕಾರವನ್ನು ಪಾಪರ್‌ ಮಾಡಿ ಬಿಟ್ಟುಹೋಗಿದ್ದರೇ? ಎಂದು ಪ್ರಶ್ನಿಸಿದರು.ಈ ಹಂತದಲ್ಲಿ ಮತ್ತೆ ಮಾತಿನ ಚಕಮಕಿ ನಡೆಯಿತು.ಬಾಲಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರದಿಂದ ಮೊದಲು ಅನುದಾನ ಬಿಡುಗಡೆ ಮಾಡಿಸಿ ಎಂದು ಛೇಡಿಸಿದರು.

ರಿಜ್ವಾನ್‌ ಅರ್ಷದ್‌ ಮಾತನಾಡಿ, ಸದನವನ್ನು ತಪ್ಪು ದಾರಿಗೆ ಎಳೆಯಬೇಡಿ. ಪತ್ರದಲ್ಲಿ ದಿವಾಳಿ ಎಂದು ಉಲ್ಲೇಖವಾಗಿಲ್ಲ ಎಂದು ಹೇಳಿದರು.ಹೀಗೆ ವಾಗ್ವಾದ ಮುಂದುವರೆದಾಗ ಸಭಾಧ್ಯಕ್ಷ ಜಿ.ಎಸ್‌‍.ಪಾಟೀಲ್‌ ಅವರು ವಿರೋಧಪಕ್ಷಗಳ ಆರೋಪಗಳ ಬಗ್ಗೆ ಸಭಾ ನಾಯಕರು, ಉಪನಾಯಕರು ಸಮರ್ಥನೆ ಮಾಡಿಕೊಳ್ಳುತಾರೆ. ಪದೇಪದೇ ಮಾತನಾಡಿದರೆ ಹೇಗೆ ಎಂದು ಹೇಳಿ ವಿಜಯೇಂದ್ರ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

RELATED ARTICLES
spot_img

Latest News