Homeರಾಜ್ಯಆಂಟಿಬಯೋಟಿಕ್‌, ನೋವು ನಿವಾರಕಗಳ ಅಕ್ರಮ ಬಳಕೆಗೆ ಕಡಿವಾಣ ಹಾಕಲು ಹೊಸ ನಿಯಮ

ಆಂಟಿಬಯೋಟಿಕ್‌, ನೋವು ನಿವಾರಕಗಳ ಅಕ್ರಮ ಬಳಕೆಗೆ ಕಡಿವಾಣ ಹಾಕಲು ಹೊಸ ನಿಯಮ

ಬೆಂಗಳೂರು, ಸೆ.23- ಔಷಧಿಗಳ ಅಕ್ರಮ ಮಾರಾಟ, ಸ್ವಯಂ ಚಿಕಿತ್ಸೆಯಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಆಂಟಿಬಯೋಟಿಕ್‌ಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಹೊಸ ಸಲಹಾ ಮಾರ್ಗಸೂಚಿ ಹೊರಡಿಸಿದೆ. ಆಂಟಿಬಯೋಟಿಕ್‌ಗಳು ಹಾಗೂ ನೋವು ನಿವಾರಕ ಔಷಧಿಗಳ ಅಸಮರ್ಪಕ ಬಳಕೆಯಿಂದ ದೀರ್ಘಕಾಲೀನ ಕಿಡ್ನಿ ಕಾಯಿಲೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯ ಬಗ್ಗೆ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶೇಷವಾಗಿ ಆಂಟಿಬಯೋಟಿಕ್‌ಗಳು ಹಾಗೂ ನಾನ್‌-ಸ್ಟಿರಾಯ್ಡಲ್‌ ಆ್ಯಂಟಿ-ಇನ್‌ಫ್ಲಮೇಟರಿ ಡ್ರಗ್ಸ್‌ (ಎನ್‌ಎಸ್‌ಎಐಡಿಎಸ್‌) ಬಳಕೆಯಲ್ಲಿ ವೈದ್ಯರು, ಫಾರ್ಮಸಿಸ್ಟ್‌ಗಳು, ರಿಟೈಲರ್‌ಗಳು, ವಿತರಕರು ಹಾಗೂ ಆರೋಗ್ಯ ಸೇವಾ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ವೈದ್ಯರಿಗೆ ಏನು ನಿಯಮ?

ರೋಗಿಯ ವಯಸ್ಸು, ಕಾಯಿಲೆಯ ಸ್ವರೂಪ, ಇತರ ಆರೋಗ್ಯ ಸಮಸ್ಯೆಗಳು, ಈಗಾಗಲೇ ಪಡೆಯುತ್ತಿರುವ ಔಷಧಿಗಳು ಹಾಗೂ ಸಂಬಂಧಿತ ಅಪಾಯಗಳನ್ನು ಪರಿಗಣಿಸಿ ಮಾತ್ರ ಆಂಟಿಬಯೋಟಿಕ್‌ ಅಥವಾ ನೋವು ನಿವಾರಕ ಔಷಧಿಗಳನ್ನು ಸೂಚಿಸಬೇಕು. ಅಗತ್ಯವಿದ್ದಾಗ ಮಾತ್ರ ಔಷಧಿ ನೀಡಬೇಕು. ಸೂಕ್ತ ಪ್ರಮಾಣದಲ್ಲಿ ಹಾಗೂ ಅಗತ್ಯವಿರುವ ಅವಧಿಗೆ ಮಾತ್ರ ಔಷಧಿ ಬಳಸುವಂತೆ ವೈದ್ಯರಿಗೆ ಸೂಚಿಸಲಾಗಿದೆ.

ಕಿಡ್ನಿ ಸಮಸ್ಯೆ ಇರುವವರು ಹಾಗೂ ಕಿಡ್ನಿ ಹಾನಿಯ ಅಪಾಯ ಹೊಂದಿರುವವರು ನೋವು ನಿವಾರಕ ಔಷಧಿಗಳನ್ನು ಬಳಸುವ ಮುನ್ನ ವೈದ್ಯರಿಗೆ ಮಾಹಿತಿ ನೀಡಬೇಕು. ನಿರ್ಜಲೀಕರಣ ಅಥವಾ ಇತರ ಆರೋಗ್ಯ ಸಮಸ್ಯೆ ಇರುವವರಲ್ಲೂ ಔಷಧಿ ಬಳಕೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.

ಸೋಂಕಿನ ಸ್ವರೂಪ, ಸೋಂಕು ಉಂಟಾಗಿರುವ ಸ್ಥಳ ಹಾಗೂ ಅದರ ತೀವ್ರತೆಯನ್ನು ಪರಿಶೀಲಿಸಿದ ಬಳಿಕವೇ ಸೂಕ್ತ ಆಂಟಿಬಯೋಟಿಕ್‌ ಆಯ್ಕೆ ಮಾಡಬೇಕು. ಅನಗತ್ಯ ಔಷಧಿ, ತಪ್ಪಾದ ಕಾಂಬಿನೇಷನ್‌, ತಪ್ಪು ಪ್ರಮಾಣ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಅವಧಿಯ ಚಿಕಿತ್ಸೆಯನ್ನು ತಪ್ಪಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ.

ಫಾರ್ಮಸಿಸ್ಟ್‌, ರಿಟೈಲರ್‌ಗಳಿಗೆ ಸೂಚನೆ

ಔಷಧಿಗಳ ಮಾರಾಟದ ವೇಳೆ 1945ರ ಔಷಧ ನಿಯಮಗಳಡಿ ನಿಗದಿಪಡಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶೆಡ್ಯೂಲ್‌ ಎಚ್‌, ಎಚ್‌1 ಸೇರಿದಂತೆ ಪ್ರಿಸ್ಕ್ರಿಪ್ಶನ್‌ ಅಗತ್ಯವಿರುವ ಔಷಧಿಗಳನ್ನು ಅನ್ವಯಿಸುವ ನಿಯಮಗಳಿಗೆ ವಿರುದ್ಧವಾಗಿ ಚಿಲ್ಲರೆ ಮಾರಾಟ ಮಾಡುವಂತಿಲ್ಲ.

ಫಾರ್ಮಸಿಸ್ಟ್‌ಗಳು ಮತ್ತು ರಿಟೈಲರ್‌ಗಳು ಆಂಟಿಬಯೋಟಿಕ್‌ಗಳು ಅಥವಾ ಪ್ರಿಸ್ಕ್ರಿಪ್ಶನ್‌ ಅಗತ್ಯವಿರುವ ಎನ್‌ಎಸ್‌ಎಐಡಿಎಸ್‌ಗಳನ್ನು ಸ್ವಯಂ ಚಿಕಿತ್ಸೆಯಾಗಿ ಬಳಸಲು ಜನರನ್ನು ಪ್ರೋತ್ಸಾಹಿಸಬಾರದು. ಔಷಧಿಯ ಲೇಬಲ್‌ನಲ್ಲಿರುವ ಎಚ್ಚರಿಕೆಗಳು ಹಾಗೂ ಮಾರಾಟದ ಷರತ್ತುಗಳನ್ನು ಪಾಲಿಸಬೇಕು. ಪ್ರಿಸ್ಕ್ರಿಪ್ಶನ್‌ ಔಷಧಿಗಳ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿಯಮಾನುಸಾರ ನಿರ್ವಹಿಸಬೇಕು.

ಸ್ವಯಂ ಚಿಕಿತ್ಸೆಗೆ ಬ್ರೇಕ್‌

ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್‌ಗಳನ್ನು ಸೇವಿಸುವುದು ಅಥವಾ ಹಿಂದಿನ ಪ್ರಿಸ್ಕ್ರಿಪ್ಶನ್‌ ಆಧರಿಸಿ ಮತ್ತೆ ಅದೇ ಔಷಧಿ ತೆಗೆದುಕೊಳ್ಳುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆಂಟಿಬಯೋಟಿಕ್‌ಗಳ ಅನಗತ್ಯ ಅಥವಾ ತಪ್ಪಾದ ಬಳಕೆಯಿಂದ ಆ್ಯಂಟಿಮೈಕ್ರೊಬಿಯಲ್‌ ರೆಸಿಸ್ಟೆನ್ಸ್‌ (ಎಎಂಆರ್‌) ಹೆಚ್ಚುವ ಅಪಾಯವಿದೆ. ಹೆಚ್ಚಿನ ವೈರಲ್‌ ಸೋಂಕುಗಳಿಗೆ ಆಂಟಿಬಯೋಟಿಕ್‌ಗಳು ಪರಿಣಾಮಕಾರಿಯಾಗುವುದಿಲ್ಲ.

ಹೀಗಾಗಿ “ಮಾತ್ರೆ ಬೇಕು, ಕೊಡಿ” ಎನ್ನುವ ಗ್ರಾಹಕರಿಗೆ ನಿಯಮಕ್ಕೆ ಒಳಪಡುವ ಔಷಧಿಗಳನ್ನು ಪ್ರಿಸ್ಕ್ರಿಪ್ಶನ್‌ ಇಲ್ಲದೆ ನೀಡದಂತೆ ಹೊಸ ಸಲಹಾ ಮಾರ್ಗಸೂಚಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನಿಯಮ ಉಲ್ಲಂಘಿಸಿದರೆ ಕ್ರಮ

ಔಷಧಿಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬಹುದು. ಪರವಾನಗಿ ಷರತ್ತುಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ನಿಯಂತ್ರಣ ಪ್ರಾಧಿಕಾರಗಳು ಕಾನೂನುಬದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ.

RELATED ARTICLES
spot_img

Latest News