Homeರಾಜ್ಯಕೆಪಿಎಸ್‌‍ಸಿ ಹಗರಣ : ಸದಸ್ಯೆ ಶಾಂತಾ ಹೊಸಮನಿ ಬಂಧನಕ್ಕೆ ಸಿಐಡಿ ಶೋಧ

ಕೆಪಿಎಸ್‌‍ಸಿ ಹಗರಣ : ಸದಸ್ಯೆ ಶಾಂತಾ ಹೊಸಮನಿ ಬಂಧನಕ್ಕೆ ಸಿಐಡಿ ಶೋಧ

ಬೆಂಗಳೂರು, ಸೆ.7- ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಹಣಕಾಸು ವಹಿವಾಟಿನ ಆರೋಪಗಳ ತನಿಖೆ ತೀವ್ರಗೊಂಡಿದ್ದು, ಪ್ರಕರಣದ ಪ್ರಮುಖ ಶಂಕಿತೆ ಎನ್ನಲಾಗಿರುವ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿಗಾಗಿ ಸಿಐಡಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ಬಳಿಕ ಶಾಂತಾ ಹೊಸಮನಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗೆ ತನಿಖಾ ಸಂಸ್ಥೆಗಳು ಕಾನೂನು ಕ್ರಮಗಳನ್ನು ಚುರುಕುಗೊಳಿಸಿವೆ. ಸಿಐಡಿ ಈಗ ಮತ್ತೊಂದು ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ಅದಕ್ಕೂ ಹಾಜರಾಗದಿದ್ದರೆ ನ್ಯಾಯಾಲಯದಿಂದ ಬಂಧನ ವಾರಂಟ್‌ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆ.18ರಂದು ಇಡಿ ಅಧಿಕಾರಿಗಳು ಶಾಂತಾ ಹೊಸಮನಿ ಸೇರಿದಂತೆ ಪ್ರಕರಣದ ಪ್ರಮುಖ ಶಂಕಿತರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಅಂದಿನಿಂದ ಶಾಂತಾ ಹೊಸಮನಿ ತನಿಖಾ ಸಂಸ್ಥೆಗಳ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಇಡಿ ಹಾಗೂ ಸಿಐಡಿ ನೀಡಿರುವ ನೋಟಿಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ಈಗಾಗಲೇ ಎರಡು ಬಾರಿ ನೋಟಿಸ್‌ ಜಾರಿ ಮಾಡಿದೆ. ಮತ್ತೊಂದು ನೋಟಿಸ್‌ ನೀಡಿದ ಬಳಿಕವೂ ವಿಚಾರಣೆಗೆ ಹಾಜರಾಗದಿದ್ದರೆ ನ್ಯಾಯಾಲಯದ ಮೂಲಕ ಬಂಧನ ವಾರಂಟ್‌ ಪಡೆಯಲು ಮುಂದಾಗಲಿದೆ ಎಂದು ತಿಳಿದುಬಂದಿದೆ.ಶಾಂತಾ ಹೊಸಮನಿ ದೇಶ ತೊರೆಯುವುದನ್ನು ತಡೆಯುವ ಉದ್ದೇಶದಿಂದ ಇಡಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲುಕ್‌ಔಟ್‌ ನೋಟಿಸ್‌ ಹೊರಡಿಸಿದೆ ಎನ್ನಲಾಗಿದೆ.

21 ಸ್ಥಳಗಳಲ್ಲಿ ಇಡಿ ಶೋಧ

ಪಶುವೈದ್ಯಾಧಿಕಾರಿಗಳ 400 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಹಣದ ವಹಿವಾಟು ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆ.18ರಂದು ಇಡಿ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಗುಜರಾತ್‌ನ ಅಹಮದಾಬಾದ್‌ ಸೇರಿದಂತೆ ಒಟ್ಟು 21 ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಕೆಪಿಎಸ್‌ಸಿ ಕಚೇರಿ, ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರ ನಿವಾಸ, ಸದಸ್ಯೆ ಶಾಂತಾ ಹೊಸಮನಿ ಅವರ ಆವರಣ, ಮಧ್ಯವರ್ತಿಗಳು, ಡಿಜಿಟಲ್‌ ಮೌಲ್ಯಮಾಪನ ಸಂಸ್ಥೆ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆದಿತ್ತು.

ಈ ವೇಳೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಹಣಕಾಸು ವಹಿವಾಟು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ನಡುವಿನ ಸಂಬಂಧವನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.

ಕನ್ನಾಳೆ, ಗ್ಯಾಂಗ್ವಾರ್‌ ವಿಚಾರಣೆ

ಪ್ರಕರಣದ ತನಿಖೆಯಲ್ಲಿ ಬಸವರಾಜ್‌ ಕನ್ನಾಳೆ ಹಾಗೂ ಜ್ಞಾನೇಂದ್ರಕುಮಾರ್‌ ಗ್ಯಾಂಗ್ವಾರ್‌ ಅವರನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇಬ್ಬರ ನಡುವೆ ನಿರಂತರ ಸಂಪರ್ಕವಿತ್ತು ಎಂಬ ಅನುಮಾನವನ್ನು ಸಿಐಡಿ ಮುಂದಿಟ್ಟಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಂದ ಹಣ ಸಂಗ್ರಹಣೆ ಹಾಗೂ ನೇಮಕಾತಿಯಲ್ಲಿ ಮಧ್ಯವರ್ತಿಗಳ ಪಾತ್ರದ ಕುರಿತು ವಿಚಾರಣೆ ಮುಂದುವರಿದಿದೆ.

ಸಾಹುಕಾರ್‌ ವಿಚಾರಣೆ

ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಕೂಡ ಪ್ರಕರಣದ ಪ್ರಮುಖ ವ್ಯಕ್ತಿಯಾಗಿದ್ದಾರೆ. ವಿಶೇಷ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಸೆ.4ರಂದು ಮತ್ತೆ ಸಿಐಡಿ ಮುಂದೆ ಹಾಜರಾಗಿ ವಿಚಾರಣೆಗೆ ಒಳಪಟ್ಟಿದ್ದರು.

ಕಲಬುರಗಿ ಮೂಲದ ಶಾಂತಾ ಹೊಸಮನಿ ಅವರನ್ನು 2021ರಲ್ಲಿ ಆರು ವರ್ಷಗಳ ಅವಧಿಗೆ ಕೆಪಿಎಸ್‌ಸಿ ಸದಸ್ಯೆಯಾಗಿ ನೇಮಕ ಮಾಡಲಾಗಿತ್ತು. ನೇಮಕಾತಿ ಅಕ್ರಮ ಹಣಕಾಸು ವಹಿವಾಟಿನಲ್ಲಿ ಅವರು ಭಾಗಿಯಾಗಿದ್ದಾರೆ ಹಾಗೂ ಅಭ್ಯರ್ಥಿಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.

ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಆ.7ರಂದು ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಅಕ್ರಮ ತಡೆ) ಕಾಯ್ದೆ-2023ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ್‌ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ಪ್ರಮುಖ ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿಯ ಸದಸ್ಯೆಯೊಬ್ಬರು ತನಿಖಾ ಸಂಸ್ಥೆಗಳ ವಿಚಾರಣೆಗೆ ಹಾಜರಾಗದೆ ಇರುವುದಾಗಿ ವರದಿಯಾಗಿರುವುದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.

RELATED ARTICLES
spot_img

Latest News