ಬೆಂಗಳೂರು,ಮಾ.21- ಶಾಸಕನಾಗಿ ಕ್ಷೇತ್ರಕ್ಕೆ ಹೋಗಲು ನನಗೆ ಭಯವಾಗುವಂತಹ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ಕೇಳುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅಭ್ಯರ್ಥಿ ಘೋಷಣೆಯಾಗಲಿದೆ. ಇನ್ನು ಮತವನ್ನೇ ಕೇಳಿಲ್ಲ.
ಆಗಲೇ ಬೆಂಕಿ ಉಂಡೆಗಳನ್ನು ಉದುರಿಸುತ್ತಿದ್ದಾರೆ. ತಮಿಳುನಾಡು, ದೆಹಲಿಯಿಂದ ಬಂದು ಬಾಂಬ್ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರೇನು ಸಂಸದರಾಗಲು ಬಂದಿದ್ದಾರೆಯೋ ಅಥವಾ ಬೆಂಗಳೂರಿನ ಶಾಂತಿ ಹಾಳು ಮಾಡಲು ಬೆಂಕಿ ಹಚ್ಚಲು ಮುಂದಾಗಿದ್ದಾರೆಯೋ ಎಂದು ಪ್ರಶ್ನಿಸಿದರು.
ಈ ಹಿಂದೆ ಬೆಂಗಳೂರು ಉತ್ತರ ಕ್ಷೇತ್ರವನ್ನು ಡಿ.ಬಿ.ಜಯಚಂದ್ರ 5 ವರ್ಷ ಪ್ರತಿನಿಧಿಸಿದ್ದರು. ಡಿ.ವಿ.ಸದಾನಂದಗೌಡ 10 ವರ್ಷ ಸಂಸದರಾಗಿದ್ದರು. ಒಂದು ದಿನವೂ ದ್ವೇಷದ ಭಾಷಣ ಮಾಡಲಿಲ್ಲ. ಸಣ್ಣಪುಟ್ಟ ವ್ಯತ್ಯಾಸವಾಗುವಂತಹ ಘಟನೆಗಳೂ ನಡೆಯಲಿಲ್ಲ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮೂರೂ ಪಕ್ಷಗಳನ್ನು ಸಮಾನಾಂತರವಾಗಿ ಕಂಡಿದ್ದರು. ಈಗಿನ ಅಭ್ಯರ್ಥಿ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ಬೆಂಕಿ ಉಗುಳಲಾರಂಭಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಯಾವ ಕ್ಷಣದಲ್ಲಿ ಏನು ಮಾತನಾಡುತ್ತಾರೋ, ಯಾವಾಗ ದ್ವೇಷ ಭಾಷಣ ಮಾಡುತ್ತಾರೋ, ನನ್ನ ವಿರುದ್ಧ ಏನು ಹೇಳಿಕೆಗಳನ್ನು ನೀಡುತ್ತಾರೋ, ಯಾರನ್ನು ಯಾರ ವಿರುದ್ಧ ಎತ್ತಿ ಕಟ್ಟುತ್ತಾರೋ ಎಂಬ ಭಯ ಕಾಡುತ್ತಿದೆ. ಶಾಸಕನಾಗಿ ನನಗೆ ಕ್ಷೇತ್ರಕ್ಕೆ ಹೋಗಲು ಆತಂಕ ಶುರುವಾಗಿದೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ತಾವು ಮತ ಹಾಕಿದ್ದಕ್ಕಾಗಿ ಬಿಜೆಪಿಯಿಂದ ನೋಟಿಸ್ ಬಂದಿತ್ತು. ಅದಕ್ಕೆ 170 ಪುಟಗಳ ಉತ್ತರ ನೀಡಿದ್ದೇನೆ. ಅವರ ಒಂದು ಪುಟದ ನೋಟಿಸ್ಗೆ ನಾನು ಸಮಗ್ರವಾಗಿ ವಿವಿಧ ನ್ಯಾಯಾಲಯಗಳ ತೀರ್ಪುಗಳು, ಹಿಮಾಚಲ ಪ್ರದೇಶ, ಮಣಿಪುರ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ನಡೆದ ಇದೇ ರೀತಿಯ ಬೆಳವಣಿಗೆಗಳನ್ನುಉಲ್ಲೇಖಿಸಿ ಸುದೀರ್ಘ ಉತ್ತರ ನೀಡಿದ್ದೇನೆ ಎಂದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನವರು ಬಿಜೆಪಿಗೆ ಮತ ಹಾಕಿದ್ದರು. ಆ ವೇಳೆ ವಿಪ್ ನೀಡಿದ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯವರು ಪ್ರಶ್ನೆ ಮಾಡಿ ವಿಪ್ ನೀಡಲು ಅವಕಾಶವಿಲ್ಲ ಎಂದು ವಾದಿಸಿದ್ದರು. ಇಲ್ಲಿ ತದ್ವಿರುದ್ಧವಾದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.
ನನಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನೋಟಿಸ್ಗೆ ನೀಡಿರುವ ಉತ್ತರದಲ್ಲಿ ರಾಜ್ಯ ನಾಯಕರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರನ್ನು ಇಂದು ಭೇಟಿ ಮಾಡಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದೇನೆ. ಕಳೆದ ಒಂದು ವಾರದಿಂದಲೂ ಅವರನ್ನು ಭೇಟಿ ಮಾಡಲಾಗಲಿಲ್ಲ. ಹೀಗಾಗಿ ಇಂದು ಮನೆಗೆ ಬರಬೇಕಾಯಿತು. ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷರಿಗೆ ಉಪಮುಖ್ಯಮಂತ್ರಿಯವರು ಫೋನ್ ಮಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ ಎಂದರು.