Friday, May 3, 2024
Homeರಾಷ್ಟ್ರೀಯಚುನಾವಣಾ ಆಯುಕ್ತರನ್ನು ನೇಮಿಸುವ ಕಾನೂನು ತಡೆಗೆ ಸುಪ್ರೀಂ ನಕಾರ

ಚುನಾವಣಾ ಆಯುಕ್ತರನ್ನು ನೇಮಿಸುವ ಕಾನೂನು ತಡೆಗೆ ಸುಪ್ರೀಂ ನಕಾರ

ನವದೆಹಲಿ,ಮಾ.21- ಲೋಕಸಭಾ ಚುನಾವಣೆಯ ಮತದಾನ ನಡೆಯಲು ಇನ್ನು ಕೆಲವು ವಾರಗಳು ಸನಿಹದಲ್ಲಿರುವಾಗ ಚುನಾವಣಾ ಆಯುಕ್ತರನ್ನು ನೇಮಿಸುವ ಕಾನೂನಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಈ ಹಂತದಲ್ಲಿ ಹಾಗೆ ಮಾಡುವುದರಿಂದ ಅವ್ಯವಸ್ಥೆ ಸೃಷ್ಟಿಯಾಗುತ್ತದೆ ಎಂದು ಮಹತ್ವದ ಆದೇಶ ನೀಡಿದೆ.

ಅರ್ಜಿಗಳನ್ನು ಅವಲೋಕನಗಳನ್ನು ಮಾಡುವಾಗ, ಹೊಸ ಕಾನೂನಿನಡಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜಾ್ಞನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಆದೇಶ ನೀಡಿತು.2023ರ ಕಾನೂನಿನಡಿ ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು. ಕಾನೂನಿನಡಿ ನೇಮಕಾತಿ ನಡೆಸಲಾಗಿದೆ. ಹೀಗಾಗಿ ಇದಕ್ಕೆ ತಡೆಯಾಜ್ಞೆ ನೀಡಲು ಆಗುವುದಿಲ್ಲ. ಚುನಾವಣಾ ಆಯೋಗವು ಕಾರ್ಯಾಂಗದ ಹೆಬ್ಬೆರಳಿನಡಿ ಇದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಈ ಹಂತದಲ್ಲಿ, ನಾವು ಶಾಸನವನ್ನು ತಡೆಹಿಡಿಯಲಾಗುವುದಿಲ್ಲ ಇದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ. ಚುನಾವಣಾ ಆಯೋಗ ಸ್ವತಂತ್ರ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದೂ ಹೇಳಿದೆ.

ಚುನಾವಣಾ ಆಯೋಗಗಳ ಆಯ್ಕೆಗಾಗಿ ಸಭೆಯನ್ನು ಪೂರ್ವಭಾವಿಯಾಗಿ ಮುಂದೂಡಲಾಗಿದೆ, ವಾಸ್ತವವನ್ನು ಎತ್ತಿ ತೋರಿಸಲು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ.ಅರ್ಜಿದಾರ ಜಯಾ ಠಾಕೂರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ತೀರ್ಪು ನೀಡಿದಾಗ ಯಾವುದೇ ಉಲ್ಲಂಘನೆಯಾಗುವುದಿಲ್ಲ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವ) ಕಾಯಿದೆ, 2023ರಲ್ಲಿ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದು ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವನ್ನು ರಾಜಕೀಯ ಮತ್ತು ಕಾರ್ಯನಿರ್ವಾಹಕ ಹಸ್ತಕ್ಷೇಪ ದಿಂದ ಪ್ರತ್ಯೇಕಿಸಬೇಕು ಎಂದು ಪ್ರತಿಪಾದಿಸಿ ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ಹೊರಗಿಡುವುದನ್ನು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲ ವಿಕಾಸ್ ಸಿಂಗ್ ಅವರು, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಟ್ಟಿರುವ ಕಾರಣ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡಬೇಕೆಂದು ಕೋರಿದರು.

ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಲ್ಲಿ ಸಿಜೆಐ ಕಡ್ಡಾಯವಾಗಿ ಭಾಗವಹಿಸಬೇಕೆಂಬ ಈ ಹಿಂದಿನ ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ, ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕ ಆಗಬೇಕು. ಆದರೆ ಸಿಜೆಐ ಅವರನ್ನು ಕೈಬಿಟ್ಟು, ಪ್ರಧಾನಿಯಿಂದ ನಾಮನಿರ್ದೇಶನ ಮಾಡಲಾದ ಕ್ಯಾಬಿನೆಟ್ ಮಂತ್ರಿಯನ್ನು ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಹಿಂದಿನ ಕಾನೂನನ್ನು ಮರುಸ್ಥಾಪಿಸಲಾಗಿದೆ. ಅಂದರೆ ಕಾರ್ಯಾಂಗದ ಆಯ್ಕೆಯು ಕಾನೂನಿನ ನಿಯಮವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಮುಖ್ಯ ಚುನಾವಣಾ ಆಯೋಗ ಮತ್ತು ಇತರ ಚುನಾವಣಾ ಆಯೋಗಗಳ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿಯ ಅವ) ಕಾಯ್ದೆ-2023ರ ಸೆಕ್ಷನ್ 7ರ ಅನುಷ್ಠಾನಕ್ಕೆ ತಡೆ ನೀಡಬೇಕು. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಮಾತ್ರವಲ್ಲದೇ ವಿವಿಧ ರಾಜಕೀಯ ಪಕ್ಷಗಳ ನಡುವೆ ನಿರ್ಣಾಯಕ ಪಾತ್ರವನ್ನು ಸಹ ವಹಿಸುತ್ತದೆ. ಆದ್ದರಿಂದ ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನಿನ ನಿಯಮದ ಸರಿಯಾದ ಅನುಷ್ಠಾನಕ್ಕಾಗಿ ನ್ಯಾಯದ ಹಿತಾಸಕ್ತಿಯಿಂದ ತಡೆ ನೀಡಬಹುದು ಎಂದು ಅರ್ಜಿಯಲ್ಲಿ ಸೇರಿಸಲಾಗಿತ್ತು.

RELATED ARTICLES

Latest News