Homeರಾಜ್ಯಪರಿಶಿಷ್ಟ ಪಂಗಡಗಳ ಪ್ರತ್ಯೇಕ ಆಯೋಗ ರಚಿಸಲು ಶಿಫಾರಸ್ಸು : ಅಂತರ್ ಸಿಂಗ್ ಆರ್ಯ

ಪರಿಶಿಷ್ಟ ಪಂಗಡಗಳ ಪ್ರತ್ಯೇಕ ಆಯೋಗ ರಚಿಸಲು ಶಿಫಾರಸ್ಸು : ಅಂತರ್ ಸಿಂಗ್ ಆರ್ಯ

ಬೆಂಗಳೂರು, ಸೆ.24 : ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣ ಕಾರ್ಯಕ್ರಮಗಳ ಜಾರಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಆಯೋಗಗಳನ್ನು ಪ್ರತ್ಯೇಕವಾಗಿ ಸ್ಥಾಪಿಸುವ ಅಗತ್ಯವಿದ್ದು, ಕೇಂದ್ರ ಸರ್ಕಾರದ ಮಾದರಿಯಲ್ಲಿ ಎರಡೂ ಆಯೋಗಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ತುರ್ತಾಗಿ ಪರಿಶಿಷ್ಟ ಪಂಗಡಗಳ ಪ್ರತ್ಯೇಕ ಆಯೋಗ ರಚಿಸಲು ಕ್ರಮಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರು ತಿಳಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದವರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಮುದಾಯಗಳ ಸುರಕ್ಷತೆಗೆ ಅನುಸರಿಸುತ್ತಿರುವ ಕ್ರಮಗಳ ಕುರಿತು ನಗರದ ಖಾಸಗಿ ಹೊಟೇಲ್ ನಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸಂವಿಧಾನದ ವಿಧಿ 338ಎ ಅಡಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವನ್ನು (NCST) ರಚಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಪಂಗಡಗಳ ಸಮುದಾಯದವರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳಿಗೆ ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ರಕ್ಷಣೆಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲಿಸಲು ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆ, ಕಲ್ಯಾಣ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸುಗಳನ್ನು ಮಾಡಲು ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

ವಿಧಿ 338ಎ ನ ಕಲಂ (5)(d) ರ ಪ್ರಕಾರ, ಈ ರಕ್ಷಣೆಗಳ ಕಾರ್ಯನಿರ್ವಹಣೆಯ ಕುರಿತಾದ ಆಯೋಗದ ವಾರ್ಷಿಕ ವರದಿಗಳನ್ನು ಹಾಗೂ ಸೂಕ್ತವೆಂದು ಪರಿಗಣಿಸಿದ ಇಲಾಖೆಯ ಇತರ ಸಂದರ್ಭಗಳಲ್ಲಿ ಭಾರತದ ಮಾನ್ಯ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡಗಳಿಗಾಗಿರುವ ಸಂವಿಧಾನಾತ್ಮಕ ರಕ್ಷಣೆಗಳು, ಕಲ್ಯಾಣ ಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಆಯೋಗವು ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ಉದ್ದೇಶಕ್ಕಾಗಿ, ಸರ್ಕಾರದ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಅನುಗುಣವಾಗಿ ರಾಜ್ಯ ಮಟ್ಟದ ಪರಿಶೀಲನಾ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಳೆದ ಮೂರು ದಿನಗಳಿಂದ ದಕ್ಷಿಣ ಭಾರತದಲ್ಲಿ ಆಯೋಗವು ಪ್ರವಾಸ ಆರಂಭಿಸಿದ್ದು, ನಿನ್ನೆ ಹಾಗೂ ಮೊನ್ನೆ ತಮಿಳುನಾಡು ರಾಜ್ಯದ ಪ್ರಗತಿ ಪರಿಶಿಲನೆ ಸಭೆ ನಡೆಸಲಾಯಿತು. ಪ್ರಧಾನಮಂತ್ರಿಗಳ ವಿಶೇಷ ಅಭಿಯಾನದ ಅಂಗವಾಗಿ ಈ ಪ್ರವಾಸ ಹಮ್ಮಿಕೊಳ್ಳುವ ಮೂಲಕ ವಾಸ್ತವ ಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಈ ಪ್ರವಾಸದಲ್ಲಿ ಪರಿಶಿಷ್ಟ ಪಂಗಡಗಳ ಯುವಕರೊಂದಿಗೆ ಸಂವಾದ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಜನ-ಸಾಮಾನ್ಯರೊಂದಿಗೆ ಸ್ಥಳೀಯ ಸಮಸ್ಯೆಗಳು ಸೇರಿದಂತೆ ಸರ್ಕಾರದ ಯೋಜನೆಗಳ ಜಾರಿ ಕುರಿತು ಚರ್ಚಿಸಲಾಗುತ್ತಿದೆ. ಇಂದು ಬೆಳಿಗ್ಗೆಯಿಂದ ಕರ್ನಾಟಕ ಸರ್ಕಾರದ ಯೋಜನೆಗಳ ಜಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಪರಿಶಿಷ್ಟ ಪಂಗಡಗಳ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಮುಖ್ಯವಾಗಿ ಪರಿಶಿಷ್ಟ ಪಂಗಡಗಳ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ದಾಖಲಾಗಿರುವ ದೂರು ಗಳ ಕುರಿತು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಇಲ್ಲಿನ ದೊಡ್ಡ ಸಮಸ್ಯೆ ಎಂದರೆ ಇಲ್ಲಿ ಪರಿಶಿಷ್ಟ ಪಂಗಡಗಳ ಶೇ. 7 ರಷ್ಟು ಜನರಿದ್ದಾರೆ ಆದರೆ ಮೀಸಲಾತಿ ಕೇವಲ 3% ಇರುವುದು ದುರದೃಷ್ಟ, ಅದನ್ನು ಶೇ. 7% ಕ್ಕೆ ಏರಿಸುವಂತೆ ನಿರ್ದೇಶನ ನೀಡಲಾಗಿದೆ.

ಸೂಕ್ತ ನ್ಯಾಯಕ್ಕಾಗಿ ಕೇಂದ್ರ ಸರ್ಕಾರದ https://ncstgrams.gov.in/public/Home.aspx ನಲ್ಲಿ ದೂರು ದಾಖಲಿಸಬಹುದಾಗಿದೆ. ಸೂಕ್ತ ನ್ಯಾಯಕ್ಕಾಗಿ ಆಯೋಗ ಸದಾ ಜನರ ಜೊತೆಗಿರುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಜಾರಿಯಾದಲ್ಲಿ ಮೊದಲು ಸಮಸ್ಯೆಯಾಗುವುದು ಪರಿಶಿಷ್ಟ ಪಂಗಡಗಳ ಜನರಿಗೆ, ಅವರನ್ನು ಅಭಿವೃದ್ಧಿ ಹೆಸರಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ. ಇದರ ಬಗ್ಗೆ ಆಯೋಗಕ್ಕೆ ಅರಿವಿದೆ.

ಇಲ್ಲಿ ಪಂಚಾಯತ್ ಚುನಾವಣೆಯಾಗದಿರುವುದು ಸಹ ಒಂದು ದೊಡ್ಡ ಸಮಸ್ಯೆಯಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಅಲ್ಲಿನ ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ಆಲಿಸಲು ಅಲ್ಲಿಗೆ ಒಂದು ತಿಂಗಳು ಒಳಗಾಗಿ ಭೇಟಿ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಜಾಟೂತು ಹುಸೇನ್, ಜಂಟಿ ಕಾರ್ಯದರ್ಶಿ ಅಮಿತ್ ನಿರ್ಮಲ್, ನಿರ್ದೇಶಕರಾದ ಪೂರ್ಣೇಂದು ಕಾಂತ್, ಡಾ. ಪಿ ಕಲ್ಯಾಣ ರೆಡ್ಡಿ ಹಾಗೂ ಕರ್ನಾಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಗದೇವಿ ಹಿರೇಮಠ ಅವರು ಉಪಸ್ಥಿತರಿದ್ದರು.

RELATED ARTICLES
spot_img

Latest News