Homeಬೆಂಗಳೂರುಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಇರುವ ನಂದಿನಿ ಮಳಿಗೆ ತೆರವಿಗೆ ಆಗ್ರಹ

ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಇರುವ ನಂದಿನಿ ಮಳಿಗೆ ತೆರವಿಗೆ ಆಗ್ರಹ

ಬೆಂಗಳೂರು, ಸೆ.24- ನಗರದ ಐತಿಹಾಸಿಕ ಹಾಗೂ ಪಾರಂಪರಿಕ ತಾಣ ಲಾಲ್‌ಬಾಗ್‌ ಪಶ್ಚಿಮ ದ್ವಾರದ ಮುಂಭಾಗ ಸ್ಥಾಪಿಸಲಾಗಿರುವ ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಸಂಪೂರ್ಣ ದಾಖಲೆಗಳೊಂದಿಗೆ ಮನವಿ ಸಲ್ಲಿಸಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸ್ತಾವ ತಿರಸ್ಕರಿಸಿದ್ದರೂ ಅನುಮತಿ?

ಸುಮಾರು 240 ಎಕರೆ ಪ್ರದೇಶದಲ್ಲಿರುವ ಲಾಲ್‌ಬಾಗ್‌ ಹಲವು ಶತಮಾನಗಳ ಇತಿಹಾಸ ಹೊಂದಿದ್ದು, ಅದರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕಿದೆ. ಇಂತಹ ಪಾರಂಪರಿಕ ತಾಣದ ಪಶ್ಚಿಮ ದ್ವಾರದ ಮುಂಭಾಗ ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸುವ ಸಂಬಂಧ ಬಿಬಿಎಂಪಿಯಿಂದ ಬಂದಿದ್ದ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು 2025ರ ಆಗಸ್ಟ್‌ 22ರಂದು ತಿರಸ್ಕರಿಸಿದ್ದರು ಎಂದು ರಮೇಶ್‌ ತಿಳಿಸಿದ್ದಾರೆ.

ಆದರೆ, ಬಳಿಕ ಬೆಂಗಳೂರು ಕೇಂದ್ರ ನಗರ ಪಾಲಿಕೆಯು 2026ರ ಏಪ್ರಿಲ್‌ 22ರಂದು ಇದೇ ಸ್ಥಳದಲ್ಲಿ ನಂದಿನಿ ಮಳಿಗೆ ಸ್ಥಾಪಿಸಲು ಅನುಮೋದನೆ ನೀಡಿದ್ದು, ವಿಷಯ ಸಂಖ್ಯೆ 01/2026-27ರ ಅಡಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

100 ಚದರ ಅಡಿ ಜಾಗ ಹಸ್ತಾಂತರ

ಇದಾದ ಬಳಿಕ ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತರು-2 ಅವರು ಜೂನ್‌ 10ರಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕರಾರು ಮಾಡಿಕೊಂಡಿದ್ದಾರೆ. ಜುಲೈ 22ರಂದು ಲಾಲ್‌ಬಾಗ್‌ ಪಶ್ಚಿಮ ದ್ವಾರದ ಮುಂಭಾಗದ 100 ಚದರ ಅಡಿ ಜಾಗವನ್ನು ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಲಾಲ್‌ಬಾಗ್‌ ಪಶ್ಚಿಮ ದ್ವಾರದ ಮುಂಭಾಗ ನಿರ್ಮಿಸಲಾಗಿರುವ ನಂದಿನಿ ಮಳಿಗೆಯನ್ನು ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆಯ ನಿರ್ದೇಶಕರು ಆಗಸ್ಟ್‌ 10ರಂದು ಆದೇಶಿಸಿದ್ದಾರೆ. ಆದರೂ ಈವರೆಗೆ ಮಳಿಗೆ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಮೇಶ್‌ ಆರೋಪಿಸಿದ್ದಾರೆ.

ಮಳಿಗೆ ತೆರವಿಗೆ ಆಗ್ರಹಿಸಿ ಲಾಲ್‌ಬಾಗ್‌ ನಡಿಗೆದಾರರ ಒಕ್ಕೂಟವು ಆಗಸ್ಟ್‌ 12ರಂದು ನೂರಾರು ನಡಿಗೆದಾರರ ಸಹಿಗಳೊಂದಿಗೆ ಜಿಬಿಎ ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ.

ಲಾಲ್‌ಬಾಗ್‌ನಂತಹ ಐತಿಹಾಸಿಕ ಪಾರಂಪರಿಕ ತಾಣದ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಈಗಾಗಲೇ ತೋಟಗಾರಿಕೆ ಇಲಾಖೆ ತೆರವಿಗೆ ಸೂಚನೆ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಪ್ರಶ್ನಾರ್ಹ ಎಂದು ಎನ್‌.ಆರ್‌. ರಮೇಶ್‌ ಹೇಳಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆ

ಮಳಿಗೆಯನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರ ಹಾಗೂ ಜಿಬಿಎ ಅಧಿಕಾರಿಗಳಿಗೆ ಒತ್ತಾಯಿಸಿರುವ ಅವರು, ಈ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕ್ರಮದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ನಗರದ ನ್ಯಾಯಾಲಯ ಹಾಗೂ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

RELATED ARTICLES
spot_img

Latest News