ಬೆಂಗಳೂರು, ಸೆ.24- ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾಗಲೇ ಕಳ್ಳತನದ ಹಾದಿ ಹಿಡಿದಿದ್ದ ಹೈಟೆಕ್ ಖದೀಮನೊಬ್ಬ ಪ್ರಯಾಣ ಮಾಡುತ್ತಿದ್ದದ್ದು ವಿಮಾನದಲ್ಲೇ. ನಗರಕ್ಕೆ ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡಿ ಮತ್ತೆ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಈತನ ಬಂಧನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಬಿ.ಟೆಕ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ತೆಲಂಗಾಣದ ನಲ್ಲೂರು ನಿವಾಸಿ ವಿನೋದ್ ಕುಮಾರ್ (32) ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಯುವತಿಯೊಬ್ಬಳ ಪರಿಚಯವಾಗಿ, ಬಳಿಕ ಆಕೆಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ.
ನಂತರ ಆಕೆ ಬಾಂಗ್ಲಾದೇಶಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಳು. ವಿನೋದ್ ಕುಮಾರ್ ಹಲವು ಬಾರಿ ಅಲ್ಲಿಗೆ ಹೋಗಿ ಬರುತ್ತಿದ್ದನು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಈ ಹೈಟೆಕ್ ಕಳ್ಳ ಮನೆಗಳ್ಳತನ ಮಾಡಿ ಮತ್ತೆ ವಿಮಾನದಲ್ಲೇ ಹೈದರಾಬಾದ್‌ಗೆ ಪರಾರಿಯಾಗುತ್ತಿದ್ದನು.
ಈತನ ಪತ್ನಿ ದೆಹಲಿಗೆ ಬಂದಿರುವ ವಿಷಯ ತಿಳಿದು, ಆಕೆಗೆ ಹಣ ನೀಡುವ ಸಲುವಾಗಿ ಹೈದರಾಬಾದ್‌ನಿಂದ ದೆಹಲಿಗೆ ತೆರಳಿದ್ದನು. ಅಲ್ಲಿಂದ ವಾಪಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
20 ದಿನಗಳ ಹಿಂದಷ್ಟೇ ವಾರಾಣಸಿ ಜೈಲಿನಿಂದ ಈತ ಬಿಡುಗಡೆಯಾಗಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ಬಯಲಾಗಿದೆ.ಈತನ ವಿರುದ್ಧ ತೆಲಂಗಾಣದಲ್ಲಿ 28, ಉತ್ತರ ಪ್ರದೇಶದಲ್ಲಿ ಒಂದು ಹಾಗೂ ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು 30 ಪ್ರಕರಣಗಳು ದಾಖಲಾಗಿವೆ. ತೆಲಂಗಾಣ ಪೊಲೀಸರಿಗೆ ಬೇಕಾಗಿದ್ದ ಈತ ಇದೀಗ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನ ಹೈಟೆಕ್ ಕಳ್ಳತನದ ವಿವರಗಳು ಬಹಿರಂಗವಾಗಿವೆ.
