ಬೆಂಗಳೂರು, ಸೆ.24- ಜೆಡಿಎಸ್ ಮುಖಂಡರೊಬ್ಬರ ಮನೆಯ ಸೆಕ್ಯೂರಿಟಿ ಗಾರ್ಡ್ ಮನೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಾಗರಾಜು (58) ಆತ್ಮಹತ್ಯೆ ಮಾಡಿಕೊಂಡಿರುವ ಸೆಕ್ಯೂರಿಟಿ ಗಾರ್ಡ್. ಮೂಲತಃ ಅರಸೀಕೆರೆಯವರಾದ ಇವರು ಪಾರ್ವತಿ, ಹೇಮಲತಾ ಹಾಗೂ ಶೋಭಾ ಎಂಬ ಮೂವರು ಪತ್ನಿಯರನ್ನು ಹೊಂದಿದ್ದರು. ಪಾರ್ವತಿ ಅವರೊಂದಿಗೆ ಸದ್ಯ ವಾಸವಾಗಿರಲಿಲ್ಲ. ನಾಗರಾಜು ಇಬ್ಬರು ಪತ್ನಿಯರು ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಈ ಹಿಂದೆ ಚಿಕ್ಕಪೇಟೆಯಲ್ಲಿ ವಾಸವಾಗಿದ್ದರು. ಬಳಿಕ ಕುಟುಂಬ ಲಗ್ಗೆರೆಗೆ ಮನೆ ಬದಲಾಯಿಸಿತ್ತು.
ಲಗ್ಗೆರೆ ಮುಖ್ಯರಸ್ತೆಯಲ್ಲಿರುವ ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಮನೆಯಲ್ಲಿ ನಾಗರಾಜು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.ಎಂದಿನಂತೆ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೆಲಸಕ್ಕೆ ಅಂದಾನಪ್ಪ ಅವರ ಮನೆಗೆ ಬಂದಿದ್ದ ನಾಗರಾಜು, ಮನೆಯ ಕಾಂಪೌಂಡ್ ಆವರಣದಲ್ಲಿದ್ದ ಸ್ಟಾರ್ ಫ್ರೂಟ್ ಮರಕ್ಕೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಯಾರ ಗಮನಕ್ಕೂ ಬಂದಿರಲಿಲ್ಲ. ಇದೇ ಮಾರ್ಗದಲ್ಲಿ ಬೆಳಗ್ಗೆ ಶಾಲಾ ಬಸ್ ತೆರಳುತ್ತಿದ್ದಾಗ ಚಾಲಕ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ನೇಣಿನ ಕುಣಿಕೆಯಿಂದ ನಾಗರಾಜು ಅವರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗರಾಜು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
