Homeರಾಜ್ಯಮದುವೆಯಾಗುವುದಾಗಿ ನಂಬಿಸಿ ₹9 ಲಕ್ಷ ವಂಚನೆ ಆರೋಪ : ಟ್ಯಾಟೂ ಆರ್ಟಿಸ್ಟ್ ವಿರುದ್ಧ ಮಹಿಳೆ ದೂರು

ಮದುವೆಯಾಗುವುದಾಗಿ ನಂಬಿಸಿ ₹9 ಲಕ್ಷ ವಂಚನೆ ಆರೋಪ : ಟ್ಯಾಟೂ ಆರ್ಟಿಸ್ಟ್ ವಿರುದ್ಧ ಮಹಿಳೆ ದೂರು

ಬೆಂಗಳೂರು, ಸೆ.25- ಟ್ಯಾಟೂ ಆರ್ಟಿಸ್ಟ್‌ ಮದುವೆಯಾಗುವುದಾಗಿ ನಂಬಿಸಿ ತನ್ನಿಂದ ₹9 ಲಕ್ಷ ಹಣ ಪಡೆದು ಮೋಸ ಮಾಡಿದ್ದಾನೆಂದು 34 ವರ್ಷದ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಮ್ಮ ವೈಯಕ್ತಿಕ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಪಡೆದಿದ್ದಾನೆ ಎಂದು ಟ್ಯಾಟೂ ಆರ್ಟಿಸ್ಟ್‌ ಅರ್ಜುನ್‌ ವಿರುದ್ಧ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸೆ.2ರಂದು ಪುನಃ ಹಣಕ್ಕಾಗಿ ಒತ್ತಾಯಿಸಿದಾಗ ತಾವು ನಿರಾಕರಿಸಿದ್ದರಿಂದ ಅರ್ಜುನ್‌ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೆ, ‘ನಿನಗೆ ಬೇರೆಯವರೊಂದಿಗೆ ಸಂಬಂಧವಿದೆ’ ಎಂದು ಹೀಯಾಳಿಸಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಅರ್ಜುನ್‌ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಮಹಿಳೆಯ ಪತಿ ಮೃತಪಟ್ಟಿರುವ ವಿಚಾರ ತಿಳಿದಿದ್ದ ಅರ್ಜುನ್‌, ಆಕೆಗೆ ಬಾಳು ಕೊಡುತ್ತೇನೆ ಎಂದು ಹೇಳಿ ಆತ್ಮೀಯತೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ನಂತರ ಹಂತ ಹಂತವಾಗಿ ತನ್ನಿಂದ ₹9 ಲಕ್ಷ ಹಣ ಪಡೆದುಕೊಂಡು ವಾಪಸ್‌ ನೀಡದೆ ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಈ ಮಹಿಳೆ ವಿರುದ್ಧ ಟ್ಯಾಟೂ ಆರ್ಟಿಸ್ಟ್‌ ಅರ್ಜುನ್‌ ದೂರು ನೀಡಿದ್ದರು. ಇದೀಗ ಮಹಿಳೆಯೂ ಅರ್ಜುನ್‌ ವಿರುದ್ಧ ದೂರು ನೀಡಿದ್ದಾರೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News