Homeರಾಜ್ಯಹೊಸದಾಗಿ ಎಸ್‌‍ಐಆರ್‌ ನಡೆಸುವಂತೆ ಸಿಎಂ ಡಿಕೆಶಿ ಒತ್ತಾಯ

ಹೊಸದಾಗಿ ಎಸ್‌‍ಐಆರ್‌ ನಡೆಸುವಂತೆ ಸಿಎಂ ಡಿಕೆಶಿ ಒತ್ತಾಯ

ಬೆಂಗಳೂರು, ಸೆ.26- ರಾಜ್ಯದಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ಸರಿಯಾಗಿ ನಡೆಯು ತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಲ್ಲಾ ಪ್ರಕ್ರಿಯೆಗಳನ್ನು ಕೂಡಲೇ ರದ್ದುಗೊಳಿಸಿ ಹೊಸದಾಗಿ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ನಗರದ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್‌‍ ವತಿಯಿಂದ ಚುನಾವಣಾ ಮುಖ್ಯ ಆಯುಕ್ತರ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಯವರು ಮಧ್ಯಪ್ರವೇಶ ಮಾಡಬೇಕು. ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ವಜಾ ಗೊಳಿಸಬೇಕು ಮತ್ತು ಕೂಡಲೇ ಬಂಧಿಸಿ ಕ್ರಿಮಿನಲ್‌ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಮೊದಲು ಇಡೀ ವಿಶ್ವವೇ ಭಾರತವನ್ನು ಪ್ರಜಾಪ್ರಭುತ್ವದ ರಾಷ್ಟ್ರ ಎಂದು ಕೊಂಡಾಡುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆ ನಂಬಿಕೆ ಕಳೆದುಕೊಳ್ಳುತ್ತಿದೆ. ದೇಶದ ಚುನಾವಣಾ ವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೀಡುವಂತಾಗಿದೆ ಎಂದು ವಿಷಾದಿಸಿದರು.

ಚುನಾವಣಾ ಆಯೋಗಕ್ಕೆ ಸ್ವಾಯತ್ತ ಸ್ಥಾನವನ್ನು ನೀಡಲಾಗಿತ್ತು. ಅದನ್ನು ಬಳಸಿಕೊಂಡು ನ್ಯಾಯಯುತ ಚುನಾವಣಾ ಮೂಲಕ ಪ್ರಜಾಪ್ರಭುತ್ವವನ್ನು ತಂದೆಯ ರೀತಿ ರಕ್ಷಿಸಬೇಕಿತ್ತು. ಆದರೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಜೆಪಿಗೆ ವಿರುದ್ಧವಾಗಿ ಮತ ಹಾಕುವವರನ್ನು ತೆಗೆದುಹಾಕಿದ್ದಾರೆ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ದೂರಿದರು.

ತಮ ಮತದಾನದ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ದೇಶಾದ್ಯಂತ ಜನ ರೊಚ್ಚಿಗೆದ್ದಿದ್ದಾರೆ, ಪ್ರತಿಭಟನೆ ನಡೆಸುತ್ತಿದ್ದಾರೆ. ಆತಗೌರವ ಕಾಪಾಡಿಕೊಳ್ಳಲು ಬೀದಿಗಿಳಿದಿದ್ದಾರೆ ಎಂದರು.
ರಾಜ್ಯದಲ್ಲಿ 5.44 ಕೋಟಿ ಮತದಾರರಿದ್ದರು. ಅದನ್ನು 4.37ಕೋಟಿಗೆ ಕಡಿತ ಮಾಡಲಾಗಿದೆ. 30 ಲಕ್ಷ ಜನರಿಗೆ ನೋಟೀಸ್‌‍ ನೀಡಲಾಗಿದೆ.

ಬಹಳಷ್ಟು ಕ್ಷೇತ್ರಗಳಲ್ಲಿ 2.5 ಹಾಗೂ 3 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದರು. ಆಯೋಗ ಅಷ್ಟು ಸಂಖ್ಯೆಯ ಮತಗಳನ್ನು ಡೆಲಿಟ್‌ ಮಾಡುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದೆ ಎಂದರು.

ಪ್ರತಿಯೊಂದು ಮತವೂ ಅಮೂಲ್ಯ. ಅದನ್ನು ಕಾಪಾಡಿಕೊಳ್ಳಲೇಬೇಕು. ಆಯೋಗ ಮತದಾರರ ನಂಬಿಕೆಯನ್ನು ಕಳೆದುಕೊಂಡಿದೆ. ಈವರೆಗೂ ಮೋಸದಿಂದ ನಡೆದಿರುವ ಚುನಾವಣೆಗಳನ್ನು ರದ್ದು ಮಾಡಬೇಕು. ಜ್ಞಾನೇಶ್‌ ಕುಮಾರ್‌ ಲೆಕ್ಷನ್‌ ಕಮೀಷನರೋ? ಅಥವಾ ಬಿಜೆಪಿ ಸೆಲೆಕ್ಷನ್‌ ಕಮೀಷನರೋ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಚುನಾವಣಾ ಅಕ್ರಮಗಳ ವಿರುದ್ಧ ಸಂಸತ್‌ನಸಲ್ಲಿ ಚರ್ಚೆಯಾಗಬೇಕು. ಅಧಿಕಾರದ ಮೋಹ ಹೆಚ್ಚು ದಿನ ಇರುವುದಿಲ್ಲ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಇಂದಲ್ಲ ನಾಳೆ ಬದಲಾವಣೆ ಆಗಲೇಬೆಕು ಎಂದರು.ಎಸ್‌‍ಐಆರ್‌ ವಿರುದ್ಧ ಪ್ರತಿ ಹಳ್ಳಿಗಳ ಮಟ್ಟದಲ್ಲೂ ಪ್ರತಿಭಟನೆಗಳಾಗಬೇಕೆಂದು ಮುಖ್ಯಮಂತ್ರಿ, ಕಾರ್ಯಕರ್ತರಿಗೆ ಕರೆ ನೀಡಿದರು.

RELATED ARTICLES
spot_img

Latest News