Homeರಾಷ್ಟ್ರೀಯತಮಿಳುನಾಡಿನಲ್ಲಿ ಖಾಸಗಿ ಬಸ್‌‍ ಮಾಲೀಕರ ಮುಷ್ಕರ

ತಮಿಳುನಾಡಿನಲ್ಲಿ ಖಾಸಗಿ ಬಸ್‌‍ ಮಾಲೀಕರ ಮುಷ್ಕರ

ಚೆನ್ನೈ, ಸೆ.29-ಪ್ರಯಾಣ ದರ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಮಿಳುನಾಡಿನ ಖಾಸಗಿ ಬಸ್‌‍ಗಳ ಮಾಲೀಕರು ಸೆ.29ರ ಮಧ್ಯರಾತ್ರಿಯಿಂದ 24 ಗಂಟೆಗಳ ಸಾಂಕೇತಿಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಚೆನ್ನೈ, ಮದುರೈ, ನಾಗರ್‌ಕೋಯಿಲ್‌‍ ಮತ್ತು ಊಟಿಯ ಖಾಸಗಿ ಬಸ್‌‍ಗಳು ಮುಷ್ಕರದಿಂದ ಹೊರಗುಳಿಯಲಿವೆ.ತಮಿಳುನಾಡು ಬಸ್‌‍ ಆಪರೇಟರ್‌ಗಳ ಒಕ್ಕೂಟದ ಪ್ರಕಾರ ರಾಜ್ಯದಲ್ಲಿ ಸುಮಾರು 7,000 ಖಾಸಗಿ ಬಸ್‌‍ಗಳು ಸಂಚರಿಸುತ್ತಿವೆ. ಡೀಸೆಲ್‌ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಖಾಸಗಿ ಬಸ್‌‍ಗಳ ನಿರ್ವಹಣೆ ಕಷ್ಟಕರವಾಗಿದೆ. 2018ರಲ್ಲಿ ಡೀಸೆಲ್‌ ದರ ಲೀಟರ್‌ಗೆ 64 ಇದ್ದಾಗ ಪ್ರಯಾಣ ದರವನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಇದೀಗ ಡೀಸೆಲ್‌ ಬೆಲೆ 100ಕ್ಕಿಂತ ಹೆಚ್ಚಾಗಿದೆ.

ಪ್ರಸ್ತುತ ಸುಮಾರು ಶೇ.65ರಷ್ಟು ನಷ್ಟದಲ್ಲಿ ಬಸ್‌‍ಗಳನ್ನು ನಿರ್ವಹಿಸಲಾಗುತ್ತಿದೆ. ಪ್ರಯಾಣ ದರ ಪರಿಷ್ಕರಿಸದಿದ್ದರೆ ಖಾಸಗಿ ಬಸ್‌‍ಗಳ ವಲಯ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಒಕ್ಕೂಟದ ಅಧ್ಯಕ್ಷ ತಂಗರಾಜ್‌ ತಿಳಿಸಿದ್ದಾರೆ.

ಪ್ರಯಾಣ ದರ ಪರಿಷ್ಕರಣೆ ಕುರಿತು ಕಳೆದ ವರ್ಷ ಮಾರ್ಚ್‌ನಲ್ಲಿ ಮದ್ರಾಸ್‌‍ ಹೈಕೋರ್ಟ್‌ ಸರ್ಕಾರಕ್ಕೆ ಬಸ್‌‍ ನಿರ್ವಾಹಕರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಿತ್ತು. ಆದರೆ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾಸಗಿ ಬಸ್‌‍ ಮಾಲೀಕರು ಆರೋಪಿಸಿದ್ದಾರೆ.

ಅಕ್ಟೋಬರ್‌ 2ರಿಂದ ವಿಸ್ತರಿಸಲು ಉದ್ದೇಶಿಸಿರುವ ಮಹಿಳೆಯರ ಉಚಿತ ಪ್ರಯಾಣ ಯೋಜನೆಗೂ ಖಾಸಗಿ ಬಸ್‌‍ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಯೋಜನೆ ಜಾರಿಗೆ ಸಬ್ಸಿಡಿ ನೀಡಲಾಗುತ್ತಿದ್ದು, ಖಾಸಗಿ ಬಸ್‌‍ಗಳಿಗೆ ಪರಿಹಾರ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಖಾಸಗಿ ಬಸ್‌‍ಗಳಿಗೂ ಯೋಜನೆ ವಿಸ್ತರಿಸಿ, ನಷ್ಟಕ್ಕೆ ಸರ್ಕಾರ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಮುಷ್ಕರ ಸೆ.29ರ ಮಧ್ಯರಾತ್ರಿಯಿಂದ ಸೆ.30ರ ಮಧ್ಯರಾತ್ರಿವರೆಗೆ ನಡೆಯಲಿದೆ.

RELATED ARTICLES
spot_img

Latest News