ಬೆಂಗಳೂರು, ನ.14- ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದ ನಮ ಮೆಟ್ರೋದ ಪಿಂಕ್ ಲೈನ್ನಲ್ಲಿ ಇಂದಿನಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ. 7.5 ಕಿ.ಮೀ ಉದ್ದದ ಪಿಂಕ್ ಲೈನ್ ಮಾರ್ಗದಲ್ಲಿ ಇಂದಿನಿಂದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಇದರೊಂದಿಗೆ ಬೆಂಗಳೂರಿನ ನಮ್ಮ ಮೆಟ್ರೋ ಜಾಲ 96 ಕಿ.ಮೀ.ನಿಂದ 103 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಿಂಕ್ ಲೈನ್ನಲ್ಲಿ ಬೆಳಗ್ಗೆ 6ರಿಂದ ರಾತ್ರಿ 10.50ರವರೆಗೆ ರೈಲು ಕಾರ್ಯಾಚರಣೆ ನಡೆಯಲಿದೆ. ಕಾಳೇನ ಅಗ್ರಹಾರದಿಂದ ಕೊನೆಯ ರೈಲು ರಾತ್ರಿ 10.50ಕ್ಕೆ ಹೊರಡಲಿದ್ದರೆ, ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ರಾತ್ರಿ 10.54ಕ್ಕೆ ಕೊನೆಯ ರೈಲು ಹೊರಡಲಿದೆ. ಪೀಕ್ ಅವರ್ನಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಹಾಗೂ ನಾನ್ ಪೀಕ್ ಅವರ್ನಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ಶನಿವಾರ ಮತ್ತು ಭಾನುವಾರ ರೈಲುಗಳು ಪ್ರತಿ 10 ನಿಮಿಷಕ್ಕೊಮ್ಮೆ ಕಾರ್ಯಾಚರಣೆ ನಡೆಸಲಿವೆ.
ಸೋಮವಾರದಿಂದ ಭಾನುವಾರದವರೆಗೆ ವೇಳಾಪಟ್ಟಿ:
ಸೋಮವಾರ ಕಾಳೇನ ಅಗ್ರಹಾರದಿಂದ ಬೆಳಗ್ಗೆ 4.55ಕ್ಕೆ ಹಾಗೂ ಎಸ್.ಜಿ. ಪಾಳ್ಯದಿಂದ ಬೆಳಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಮಂಗಳವಾರದಿಂದ ಶನಿವಾರದವರೆಗೆ ಎರಡೂ ಟರ್ಮಿನಲ್ಗಳಿಂದ ಬೆಳಗ್ಗೆ 6 ಗಂಟೆಗೆ ಸೇವೆ ಪ್ರಾರಂಭವಾಗಲಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರೈಲುಗಳು ಸಂಚರಿಸಲಿವೆ.
10ರಿಂದ 30 ರೂ.ಗಳವರೆಗೆ ಪ್ರಯಾಣ ದರ; ಬಿಎಂಆರ್ಸಿಎಲ್ ಪಿಂಕ್ ಲೈನ್ನ ವಿವಿಧ ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು ನಿಗದಿಪಡಿಸಿದೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ 30, ಹುಳಿಮಾವು ಹಾಗೂ ಬಿಳೇಕಹಳ್ಳಿ-ಐಐಎಂಬಿ ನಿಲ್ದಾಣಗಳಿಗೆ 20 ಮತ್ತು ಎನ್.ಎಸ್. ಪಾಳ್ಯ-ಜೆ.ಪಿ. ನಗರ ನಾಲ್ಕನೇ ಹಂತದ ನಿಲ್ದಾಣಕ್ಕೆ 10 ರೂ.ದರ ನಿಗದಿಯಾಗಿದೆ.
ಪಿಂಕ್ ಲೈನ್ನಲ್ಲಿ ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೊದಲ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಬೆಳಗ್ಗೆಯೇ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. ವಿಶೇಷವಾಗಿ ಗುಲಾಬಿ ಬಣ್ಣದ ಉಡುಪು ಧರಿಸಿ ಬಂದ ಮಹಿಳೆಯರ ಗುಂಪು ಗಮನ ಸೆಳೆಯಿತು.
ಮೊದಲ ರೈಲಿನಲ್ಲಿ ಪ್ರಯಾಣಿಸಲು ಮಹಿಳೆಯರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು. ಪ್ರಯಾಣಿಕರನ್ನು ಮೆಟ್ರೋ ಮಹಿಳಾ ಸಿಬ್ಬಂದಿ ಗುಲಾಬಿ ಹೂವುಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಕೂಡ ಪಿಂಕ್ ಲೈನ್ನಲ್ಲಿ ಪ್ರಯಾಣಿಕರೊಂದಿಗೆ ಮೆಟ್ರೋದಲ್ಲಿ ಸಂಚರಿಸಿದರು.
ಬಿಳೇಕಹಳ್ಳಿ-ಐಐಎಂಬಿ ಎಂದು ನಾಮಕರಣ:ಪಿಂಕ್ ಲೈನ್ನ ನಿಲ್ದಾಣವೊಂದರ ಹೆಸರಿನ ಬದಲಾವಣೆಯೂ ಸ್ಥಳೀಯ ನಿವಾಸಿಗಳಲ್ಲಿ ಸಂಭ್ರಮ ಮೂಡಿಸಿದೆ. ಬಿಳೇಕಹಳ್ಳಿ ಪ್ರದೇಶದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಈ ಹಿಂದೆ ಐಐಎಂಬಿ ಎಂದು ಹೆಸರಿಡಲಾಗಿತ್ತು. ಸ್ಥಳೀಯರ ಬೇಡಿಕೆಯಂತೆ ನಿಲ್ದಾಣಕ್ಕೆ ಬಿಳೇಕಹಳ್ಳಿ-ಐಐಎಂಬಿ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.ಈ ಕುರಿತು ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ಗೆ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಬಿಎಂಆರ್ಸಿಎಲ್ ಕೇಂದ್ರ ಸರ್ಕಾರಕ್ಕೆ ಹೆಸರು ಬದಲಾವಣೆಯ ಪ್ರಸ್ತಾವನೆ ಸಲ್ಲಿಸಿತ್ತು.
ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ನಿಲ್ದಾಣದ ಫಲಕದಲ್ಲಿಯೂ ಬಿಳೇಕಹಳ್ಳಿ-ಐಐಎಂಬಿ ಎಂದು ಹೆಸರು ಬದಲಾಯಿಸಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಪಿಂಕ್ ಲೈನ್ನ ವಾಣಿಜ್ಯ ಸಂಚಾರ ಆರಂಭವಾಗಿರುವುದು ಬೆಂಗಳೂರಿನ ದಕ್ಷಿಣ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ. ಹೊಸ ಮಾರ್ಗದ ಮೂಲಕ ಪ್ರಮುಖ ವಸತಿ ಪ್ರದೇಶಗಳು ಹಾಗೂ ಐಐಎಂಬಿ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.
