Homeರಾಜ್ಯರಾಜ್ಯದಲ್ಲಿ 1ರಿಂದ 9ನೇ ತರಗತಿಯ ಮಕ್ಕಳಿಗೆ ಕೋಚಿಂಗ್‌ ನಿರ್ಬಂಧ

ರಾಜ್ಯದಲ್ಲಿ 1ರಿಂದ 9ನೇ ತರಗತಿಯ ಮಕ್ಕಳಿಗೆ ಕೋಚಿಂಗ್‌ ನಿರ್ಬಂಧ

ಬೆಂಗಳೂರು, ನ.14- ಮಕ್ಕಳ ಮೇಲಿನ ಅತಿಯಾದ ಶೈಕ್ಷಣಿಕ ಒತ್ತಡಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.1ರಿಂದ 9ನೇ ತರಗತಿಯ ಮಕ್ಕಳಿಗೆ ಕೋಚಿಂಗ್‌ ನೀಡುವುದಕ್ಕೆ ನಿರ್ಬಂಧ ವಿಧಿಸುವುದು ಹಾಗೂ 10ನೇ ತರಗತಿಯಿಂದ ಮಾತ್ರ ಕೋಚಿಂಗ್‌ಗೆ ಅವಕಾಶ ಕಲ್ಪಿಸುವ ಉದ್ದೇಶದ ಕರಡು ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

15 ವರ್ಷ ತುಂಬಿದವರಿಗೆ ಮಾತ್ರ ಕೋಚಿಂಗ್‌ ಸೆಂಟರ್‌ ಪ್ರವೇಶಕ್ಕೆ ಅವಕಾಶ ನೀಡುವ ಪ್ರಸ್ತಾವನೆ ಮುಂದಿಟ್ಟಿದೆ.ಬೆಳಗ್ಗೆಯಿಂದ ಸಂಜೆವರೆಗೆ ಶಾಲೆಯಲ್ಲಿ ಪಾಠ, ನಂತರ ಕೋಚಿಂಗ್‌ ಸೆಂಟರ್‌ಗಳಲ್ಲಿ ತರಗತಿಗಳು, ಮನೆಗೆ ಬಂದ ಬಳಿಕ ಹೋಂವರ್ಕ್‌ ಹಾಗೂ ಪರೀಕ್ಷೆಗಳ ಸಿದ್ಧತೆ. ಹೀಗೆ ಮಕ್ಕಳಿಗೆ ವಿಶ್ರಾಂತಿ, ಆಟ, ಮನರಂಜನೆಗೂ ಸಮಯವಿಲ್ಲದಂತಾಗಿದೆ. ಈ ಪರಿಸ್ಥಿತಿಗೆ ಬ್ರೇಕ್‌ ಹಾಕಲು ಸರ್ಕಾರ ಮುಂದಾಗಿರುವ ಕ್ರಮಕ್ಕೆ ಪೋಷಕರಿಂದ ಸ್ವಾಗತ ವ್ಯಕ್ತವಾಗಿದೆ.

ಟ್ಯೂಷನ್‌ ಹೆಸರಿನಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಓದಿನ ಒತ್ತಡ ಕಡಿಮೆಯಾಗುವುದರ ಜತೆಗೆ, ಉತ್ತಮ ರ್ಯಾಂಕ್‌ ಹಾಗೂ ಫಲಿತಾಂಶದ ಆಮಿಷವೊಡ್ಡಿ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಪ್ರವೃತ್ತಿಗೂ ಕಡಿವಾಣ ಬೀಳಬಹುದು ಎಂಬುದು ಪೋಷಕರ ಅಭಿಪ್ರಾಯವಾಗಿದೆ.
ಇಷ್ಟು ದಿನ ಉತ್ತಮ ಫಲಿತಾಂಶ, ಹೆಚ್ಚಿನ ರ್ಯಾಂಕ್‌ ಕೊಡಿಸುವುದಾಗಿ ಭರವಸೆ ನೀಡಿ ಪೋಷಕರನ್ನು ಆಕರ್ಷಿಸುತ್ತಿದ್ದ ಕೋಚಿಂಗ್‌ ಸೆಂಟರ್‌ಗಳ ಕಾರ್ಯವೈಖರಿಗೂ ಇನ್ನು ಮುಂದೆ ನಿಯಂತ್ರಣ ಹೇರುವ ಉದ್ದೇಶ ಸರ್ಕಾರಕ್ಕಿದೆ.

ಕೋಚಿಂಗ್‌ ಸೆಂಟರ್‌ಗಳ ನೋಂದಣಿ, ಶುಲ್ಕ ವಸೂಲಿ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಜಾರಿಗೆ ತರಲು ಇಲಾಖೆ ಮುಂದಾಗಿದೆ.ಕೋಚಿಂಗ್‌ ಸೆಂಟರ್‌ಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯೂ ಇದೆ. ಪ್ರತಿಯೊಂದು ಕೋಚಿಂಗ್‌ ಸೆಂಟರ್‌ ನೋಂದಣಿ ಮಾಡಿಸಿಕೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.

ಆದರೆ, ಕೋಚಿಂಗ್‌ ನಿರ್ಬಂಧವನ್ನು 9ನೇ ತರಗತಿಯವರೆಗೆ ಮಾತ್ರ ಸೀಮಿತಗೊಳಿಸುವುದೇಕೆ ಎಂಬ ಪ್ರಶ್ನೆಯೂ ಎದುರಾಗಿದೆ. 10, 11 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳ ಮೇಲೂ ಪರೀಕ್ಷೆ, ಅಂಕಗಳು ಹಾಗೂ ಸ್ಪರ್ಧಾತ್ಮಕ ಫಲಿತಾಂಶಗಳ ಒತ್ತಡ ಹೆಚ್ಚಾಗಿದೆ. ಹೀಗಾಗಿ ಈ ತರಗತಿಗಳ ವಿದ್ಯಾರ್ಥಿಗಳಿಗೂ ಟ್ಯೂಷನ್‌ ವ್ಯವಸ್ಥೆಯಿಂದ ವಿನಾಯಿತಿ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಒಟ್ಟಿನಲ್ಲಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಹೆಸರಿನಲ್ಲಿ ಅವರ ಬಾಲ್ಯವನ್ನೇ ಕಸಿದುಕೊಳ್ಳುತ್ತಿರುವ ಕೋಚಿಂಗ್‌ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಆದರೆ, ಕರಡು ಮಾರ್ಗಸೂಚಿಯ ಅಂತಿಮ ಸ್ವರೂಪ ಏನಾಗಲಿದೆ, ನಿಯಮಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಲಿವೆ ಹಾಗೂ ಮಕ್ಕಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಎಷ್ಟರಮಟ್ಟಿಗೆ ತಗ್ಗಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

Latest News