ಬೆಂಗಳೂರು,ನ.14- ಯಲಹಂಕ ನ್ಯೂಟೌನ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಾಡಹಗಲೇ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ಕುಮಾರ್ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ವಿವರಿಸಿದರು. ರಿಯಲ್ ಎಸ್ಟೇಟ್, ಹಣಕಾಸಿನ ವ್ಯವಹಾರ, ಹಳೆ ದ್ವೇಷ ಹೀಗೆ ಮುಂತಾದ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಚರಣ್ ಗೌಡ ಅವರ ಕುಟುಂಬದವರಿಂದಲೂ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಡಿಸಿಪಿ ಅವರು ತಿಳಿಸಿದರು.
ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಶಾಮೀಲಾಗಿದ್ದಾರೆ. ಗೌರಿಬಿದನೂರಿನಲ್ಲಿ ಚರಣ್ ಅವರಿಗೆ ಸೇರಿದ ರಿಯಲ್ ಎಸ್ಟೇಟ್ ಮುಖ್ಯ ಕಚೇರಿ ಇದೆ. ಈ ಹಿಂದೆ ಅವರು ಸಾಫ್್ಟವೇರ್ ಎಂಜಿನಿಯರ್ ಆಗಿದ್ದರು, ತದ ನಂತರದಲ್ಲಿ ಆ ಉದ್ಯೋಗ ತೊರೆದು ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದರು ಎಂದು ಅವರು ವಿವರಿಸಿದರು.
ನಿನ್ನೆ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಮನೆಯಿಂದ ಪತ್ನಿಯ ಜೊತೆ ಕಚೇರಿ ಬಳಿ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಹೊಂಚು ಹಾಕಿದ್ದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಚರಣ್ಗೌಡ ಅವರು ಬೆಂಗಳೂರು, ರಾಮನಗರ, ಚೆನ್ನಪಟ್ಟಣ ಮುಂದಾದ ಕಡೆಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
