ಬೆಂಗಳೂರು: ಬೆಂಗಳೂರನ್ನು ಆರೋಗ್ಯ ಸಿಟಿಯನ್ನಾಗಿ ನಿರ್ಮಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಲ್ಲಿ 12 ಲಕ್ಷ (1.2 ಮಿಲಿಯನ್) ಬೆಂಗಳೂರಿಗರಿಗೆ ಸಾಂಕ್ರಾಮಿಕವಲ್ಲದ ರೋಗಗಳ (NCD) ತಪಾಸಣೆ, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ.
ಆರೋಗ್ಯ ವರ್ಲ್ಡ್ ಹಾಗೂ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆರೋಗ್ಯ ಸಿಟಿ ಸಮ್ಮಿಟ್ 2026ರ 3ನೇ ಆವೃತ್ತಿ’ ಕಾರ್ಯಕ್ರಮದಲ್ಲಿ ಈ ಅಂಕಿಅಂಶಗಳನ್ನು ಪ್ರಕಟಿಸಲಾಯಿತು.
ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಬೆಂಗಳೂರನ್ನು ವಿಶ್ವದಲ್ಲಿಯೇ ಮೊದಲ ಆರೋಗ್ಯ ಸಿಟಿಯನ್ನಾಗಿ ಮಾಡುವ ಗುರಿಯೊಂದಿಗೆ ಈಗಾಗಲೇ 12 ಲಕ್ಷ ಬೆಂಗಳೂರಿಗರನ್ನು ತಲುಪಲಾಗಿದೆ.
ಪ್ರಮುಖವಾಗಿ, ಆರೋಗ್ಯ ಸಿಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಸಂಸ್ಥೆಗಳು 2024ರಿಂದ 2026ರವರೆಗೆ 12 ಲಕ್ಷ (1.2 ಮಿಲಿಯನ್) ಬೆಂಗಳೂರಿಗರಿಗೆ ಸಾಂಕ್ರಾಮಿಕವಲ್ಲದ ರೋಗಗಳ (NCD) ತಪಾಸಣೆ, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಒದಗಿಸಿವೆ.
‘ಒನ್ ವಾರ್ಡ್’ ಉಪಕ್ರಮಕ್ಕೆ ಚಾಲನೆ
ವಾರ್ಡ್ ಮಟ್ಟದಲ್ಲಿಯೇ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಹೆಚ್ಚಿಸುವುದು ಹಾಗೂ ಈ ಕುರಿತ ಮಾಹಿತಿ ಸಂಗ್ರಹಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. 3ನೇ ಆವೃತ್ತಿಯಲ್ಲಿ 40 ಸಂಸ್ಥೆಗಳು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ ಮುಂದಾಗಿದ್ದು, ಸುಮಾರು 15 ಲಕ್ಷಕ್ಕೂ ಹೆಚ್ಚು ಬೆಂಗಳೂರಿಗರನ್ನು ತಲುಪುವ ಗುರಿ ಹೊಂದಿವೆ.
ಆರೋಗ್ಯ ವರ್ಲ್ಡ್ನ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಳಿನಿ ಸಾಲಿಗ್ರಾಮ್ ಮಾತನಾಡಿ, “ಎಲ್ಲರ ಆರೋಗ್ಯ ಸುಧಾರಣೆ ಕೇವಲ ಒಂದು ಸಂಸ್ಥೆಯ ಹೊಣೆಗಾರಿಕೆಯಾಗಬಾರದು. ಸರ್ಕಾರ, ಕಂಪನಿಗಳು, ನಾಗರಿಕ ಸಮಾಜ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಸೇರಿದಂತೆ ವಿವಿಧ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈಗಾಗಲೇ 12 ಲಕ್ಷ ಜನರನ್ನು ತಲುಪಿದ್ದು, ಮುಂದಿನ ವರ್ಷದಲ್ಲಿ 15 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸುವುದು ನಮ್ಮ ಗುರಿ” ಎಂದರು.
ಸ್ಪರ್ಶ್ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಪ್ಯಾಲಿಯೇಟಿವ್ ಮೆಡಿಸಿನ್ ಸಲಹಾ ತಜ್ಞೆ ಡಾ. ರಜನಿ ಸುರೇಂದರ್ ಭಟ್ ಹಾಗೂ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಎಂ.ಡಿ. ಡಾ. ಅರವಿಂದ್ ಕಸ್ತೂರಿ ಅವರು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ, ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆಯಲ್ಲಿ ವೈದ್ಯರ ಪಾತ್ರದ ಕುರಿತು ಚರ್ಚಿಸಿದರು.
