ನವದೆಹಲಿ, ನ.14- ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಕದ್ದಾಲಿಕೆ ಮಾಡುವಂತಹ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಸ್ಯಾಮ್ ಪಿತ್ರೋಡಾ ಅಭಿಪ್ರಾಯಪಟ್ಟಿದ್ದಾರೆ.ತಮ್ಮ ಫೋನ್ ಅನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೊಬ್ಬೆ ಹೊಡೆಯುತ್ತಿರುವ ಸಂದರ್ಭದಲ್ಲೇ ಓವರ್‌ಸಿಸ್ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಪ್ರಧಾನಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿಯವರೊಂದಿಗೆ ಹಬ್ಬದ ಶುಭಾಶಯಗಳನ್ನು ಅತ್ಯಂತ ಆತ್ಮೀಯವಾಗಿ ವಿನಿಮಯ ಮಾಡಿಕೊಂಡಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಪಿತ್ರೋಡಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರನ್ನು ಸಮರ್ಥಿಸಿಕೊಳ್ಳುವಂತೆ ಕಂಡುಬಂದರು. ರಾಹುಲ್ ಗಾಂಧಿ ಅವರ ಆರೋಪದಿಂದ ಅಂತರ ಕಾಯ್ದುಕೊಂಡ ಪಿತ್ರೋಡಾ, ಪ್ರಧಾನಿ ಇಂತಹ ಕೆಲಸ ಮಾಡುತ್ತಾರೆ ಎಂದು ತಮಗೆ ನಂಬಿಕೆಯಿಲ್ಲ ಎಂದು ಹೇಳಿದರು.ಪ್ರಧಾನಿ ಹಾಗೆ ಮಾಡುವುದಿಲ್ಲ. ಪ್ರಧಾನಿ ಸ್ವತಃ ಸ್ಕ್ರೂಡ್ರೈವರ್ ಹಿಡಿದುಕೊಂಡು ಕಂಪ್ಯೂಟರ್ ಬಳಿ ಕುಳಿತುಕೊಳ್ಳುವುದಿಲ್ಲ, ಎಂದು ಪಿತ್ರೋಡಾ ತಿಳಿಸಿದರು.
ಆದಾಗ್ಯೂ, ತಮ್ಮ ಫೋನ್ ಕೂಡ ಕದ್ದಾಲಿಕೆಗೆ ಒಳಗಾಗಿದೆ ಎಂದು ನಂಬಲು ತಮ್ಮ ಬಳಿ ಬಲವಾದ ಕಾರಣಗಳಿವೆ ಎಂದು ಅವರು ಹೇಳಿದರು. ನನ್ನ ಫೋನ್ ಕದ್ದಾಲಿಕೆಯಾಗಿದೆ, ನನ್ನ ಲ್ಯಾಪ್‌ಟಾಪ್ ಮೇಲೆ ದಾಳಿಯಾಗಿದೆ, ನನ್ನ ಬ್ಯಾಂಕ್ ಖಾತೆಗಳು ನಿಗಾದಲ್ಲಿವೆ. ನಾನು ತಜ್ಞರನ್ನು ಸಂಪರ್ಕಿಸಿದ್ದೆ; ಅವರು ನನ್ನ ಸಾಧನಗಳನ್ನು ಪರಿಶೀಲಿಸಿದ ನಂತರ, ಕದ್ದಾಲಿಕೆಯ ಬಗ್ಗೆ ನನಗೆ ಎಚ್ಚರಿಕೆ ನೀಡಿದ್ದಾರೆ, ಎಂದು ಪಿತ್ರೋಡಾ ಹೇಳಿದರು.
ಆದರೆ, ತಮ್ಮ ಫೋನ್ ಅನ್ನು ಯಾರು ಕದ್ದಾಲಿಕೆ ಮಾಡುತ್ತಿರಬಹುದು ಎಂಬ ಬಗ್ಗೆ ಅವರು ಯಾವುದೇ ಹೆಸರನ್ನು ಬಹಿರಂಗಪಡಿಸಲಿಲ್ಲ.ಯಾರೋ ಇದನ್ನು ಮಾಡುತ್ತಿದ್ದಾರೆ. ಯಾರು ಎಂದು ನನಗೆ ಗೊತ್ತಿಲ್ಲ, ಮತ್ತು ಅದು ನನಗೆ ಮುಖ್ಯವೂ ಅಲ್ಲ. ನಾನು ಇದರೊಂದಿಗೇ ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ, ಎಂದು ಪಿತ್ರೋಡಾ ತಿಳಿಸಿದರು.
ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರವು ತನ್ನ ಮೇಲೆ ನಿಗಾ ಇರಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಅನ್ನು ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಇದೇ ವೇಳೆ, ತಮ್ಮೊಂದಿಗೆ ಮುಕ್ತ ಚರ್ಚೆಗೆ (ಓಪನ್ ಡಿಬೇಟ್) ಬರುವಂತೆ ಅವರು ಪ್ರಧಾನಿ ಮೋದಿಯವರಿಗೆ ಮತ್ತೊಮ್ಮೆ ಸವಾಲು ಹಾಕಿದರು.
ಪ್ರಧಾನಿಯವರಿಗೆ ಈ ವಿಷಯ ತಿಳಿದಿದೆ, ಏಕೆಂದರೆ ಅವರೇ ನನ್ನ ಫೋನ್ ಅನ್ನು ಕದ್ದಾಲಿಕೆ ಮಾಡುತ್ತಿದ್ದಾರೆ. ಅವರು ಮುಖಾಮುಖಿ ಚರ್ಚೆಗೆ ಒಪ್ಪಿಕೊಂಡ ದಿನ, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವುದು ಯಾರು, ದೇಶವಿರೋಧಿ ಯಾರು ಮತ್ತು ಅವರು ಎಷ್ಟು ಕಾಲದಿಂದ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಕಾಂಗ್ರೆಸ್ ಪಕ್ಷ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
