Homeರಾಜ್ಯಪಟಾಕಿ ಮಾರಾಟ ಮಾಡಿದವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಗ್ ಶಾಕ್‌

ಪಟಾಕಿ ಮಾರಾಟ ಮಾಡಿದವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಗ್ ಶಾಕ್‌

ಬೆಂಗಳೂರು, ನ.14- ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಯುಮಾಲಿನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಹಸಿರು ಪಟಾಕಿಗಳ ಮಾರಾಟದ ಹೆಸರಿನಲ್ಲಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಲಾಗಿದೆಯೇ ಎಂಬ ಅನುಮಾನ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕಾಡುತ್ತಿದೆ.

ಹೀಗಾಗಿ ಪಟಾಕಿ ಮಾರಾಟಗಾರರಿಗೆ ಶಾಕ್‌ ನೀಡಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಸಿರು ಪಟಾಕಿಗಳನ್ನೇ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದ್ದರೂ, ಕೆಲವು ವ್ಯಾಪಾರಿಗಳು ನಿಯಮ ಉಲ್ಲಂಘಿಸಿ ಹೆಚ್ಚಿನ ರಾಸಾಯನಿಕ ಅಂಶಗಳನ್ನು ಹೊಂದಿರುವ ಪಟಾಕಿಗಳನ್ನು ಮಾರಾಟ ಮಾಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ.

50ಕ್ಕೂ ಹೆಚ್ಚು ಸ್ಯಾಂಪಲ್ಸ್ ಸಂಗ್ರಹ:ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಹಿನ್ನೆಲೆಯಲ್ಲಿ ನಗರದ ವಿವಿಧ ಪಟಾಕಿ ಮಾರಾಟ ಮಳಿಗೆಗಳಿಂದ 50ಕ್ಕೂ ಹೆಚ್ಚು ಪಟಾಕಿ ಮಾದರಿಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಅವು ನಿಜವಾಗಿಯೂ ಹಸಿರು ಪಟಾಕಿಗಳೇ ಅಥವಾ ಹೆಚ್ಚಿನ ರಾಸಾಯನಿಕ ಅಂಶಗಳನ್ನು ಹೊಂದಿರುವ ಸಾಮಾನ್ಯ ಪಟಾಕಿಗಳೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಪ್ರಯೋಗಾಲಯದ ವರದಿ ಬಂದ ಬಳಿಕ ಪಟಾಕಿ ಮಾರಾಟಗಾರರು ನಿಯಮ ಪಾಲಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಲಿದೆ. ಒಂದು ವೇಳೆ ಹಸಿರು ಪಟಾಕಿಗಳ ಬದಲಿಗೆ ಬೇರೆ ಪಟಾಕಿಗಳನ್ನು ಮಾರಾಟ ಮಾಡಿರುವುದು ದೃಢಪಟ್ಟರೆ, ಸಂಬಂಧಪಟ್ಟ ವ್ಯಾಪಾರಿಗಳ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಮುಂದಿನ ಬಾರಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡದಿರುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಶಿವಕಾಶಿಯಿಂದಲೇ ತಪಾಸಣೆಗೆ ಪ್ಲಾನ್‌‍:ಇನ್ನು ಮುಂದೆ ತಮಿಳುನಾಡಿನ ಶಿವಕಾಶಿಯಿಂದ ಬೆಂಗಳೂರಿಗೆ ಪಟಾಕಿಗಳನ್ನು ಸಾಗಿಸುವ ಹಂತದಲ್ಲೇ ಕಡ್ಡಾಯ ತಪಾಸಣೆ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ನಗರಕ್ಕೆ ಬರುವ ಪಟಾಕಿಗಳು ನಿಗದಿತ ಮಾನದಂಡಗಳನ್ನು ಪಾಲಿಸಿವೆಯೇ ಎಂಬುದನ್ನು ಆರಂಭದಲ್ಲೇ ಪರಿಶೀಲಿಸಲು ಸಾಧ್ಯವಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.

ವ್ಯಾಪಾರಿಗಳಿಗೆ ಬೀಳುತ್ತಾ ದಂಡದ ಬಿಸಿ?ಹಸಿರು ಪಟಾಕಿಗಳ ಮಾರಾಟಕ್ಕೆ ಸೂಚನೆ ನೀಡಿದ್ದರೂ, ನಿಯಮ ಉಲ್ಲಂಘನೆಯಿಂದಾಗಿ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಸದ್ಯ ಸಂಗ್ರಹಿಸಿರುವ ಪಟಾಕಿ ಮಾದರಿಗಳ ಪ್ರಯೋಗಾಲಯದ ವರದಿಯ ಮೇಲೆ ಎಲ್ಲರ ಗಮನ ನೆಟ್ಟಿದೆ.ವರದಿಯಲ್ಲಿ ನಿಯಮ ಉಲ್ಲಂಘನೆ ದೃಢಪಟ್ಟರೆ ಪಟಾಕಿ ವ್ಯಾಪಾರಿಗಳಿಗೆ ದಂಡದ ಬಿಸಿ ತಟ್ಟುವ ಸಾಧ್ಯತೆಯಿದೆ. ಅಲ್ಲದೆ, ಮುಂದಿನ ವರ್ಷ ಪಟಾಕಿ ಮಾರಾಟದ ಪರವಾನಗಿ ಪಡೆಯುವುದೂ ಕಷ್ಟವಾಗಬಹುದು. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಶೀಲನೆಯ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

RELATED ARTICLES

Latest News