ಬೆಂಗಳೂರು, ನ.14- ಮೇಕೆದಾಟು ಯೋಜನೆಯ ಬಗ್ಗೆ ರಾಜಕಾರಣ ಬಿಟ್ಟು ತಮಿಳುನಾಡು ವಾಸ್ತವ ಪರಿಸ್ಥಿತಿ ತಿಳಿಯಲು ಮುಂದಾಗಬೇಕೆಂದು ಆಗ್ರಹಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಪ್ರಮುಖ ವಿಚಾರಗಳಿಗೆ ಸಂಬಂಧಪಟ್ಟಂತೆ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಬಯಸಿದ್ದು, ಪ್ರಧಾನಮಂತ್ರಿಯವರು ಅದಕ್ಕೆ ಅನುಮತಿಸಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸೌಧಲ್ಲಿಂದು ನೆಹರೂ ಜನ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಪರಸ್ಪರ ಸ್ಪರ್ಧಿಸುತ್ತೇವೆ. ಆದರೆ, ಅಭಿವೃದ್ಧಿಯಲ್ಲಿ ಸಹಕರಿಸುತ್ತೇವೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ. ಈ ವಿಷಯವಾಗಿ ಪ್ರಧಾನಿಯವರ ಬಳಿ ಸರ್ವ ಪಕ್ಷ ನಿಯೋಗ ತೆರಳಲು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಅಗತ್ಯ ಇದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಕಳುಹಿಸುತ್ತಿದ್ದೇವೆ ಎಂದರು.
ಮೇಕೆದಾಟು ಯೋಜನೆ ವಿಚಾರದಲ್ಲಿ-ಕರ್ನಾಟಕ ಸುಪ್ರೀಂಕೋರ್ಟಿನ ಆದೇಶವನ್ನು ಪಾಲಿಸುತ್ತಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಅವರ ಆಕ್ಷೇಪಕ್ಕೆ ಪ್ರತಿಕ್ರಿಯೆಸಿದ ಡಿ.ಕೆ.ಶಿವಕುಮಾರ್ ಅವರು, ಯಾರು ಏನೇ ಟೀಕೆ ಮಾಡಲಿ, ನಾನು ನನ್ನ ರಾಜ್ಯಕ್ಕೆ ಹಿತವಾಗಿದ್ದನ್ನೇ ಮಾಡುತ್ತೇನೆ. ತಮಿಳುನಾಡಿನ ಕಾಂಗ್ರೆಸ್, ಡಿಎಂಕೆ, ಎಐಎಡಿಎಂಕೆ, ಟಿವಿಕೆ ಸೇರಿದಂತೆ ಯಾರು ಬೇಕಾದರೂ ಟೀಕೆ ಮಾಡಲಿ. ದೇಶದಲ್ಲಿ ನೆಲದ ಕಾನೂನು ಎಂಬುದೊಂದಿದೆ. ನಾವು ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ಸುಪ್ರೀಂಕೋರ್ಟ್ ತಮಿಳುನಾಡಿಗೆ 177 ಟಿಎಂಸಿ ನೀರಿನ ಪಾಲು ಪಡೆಯಲು ಸ್ವಾತಂತ್ರ್ಯ ನೀಡಿದೆ. ಅದೇ ರೀತಿ ನಮಗೂ ಅಣೆಕಟ್ಟೆ ನಿರ್ಮಿಸುವ ಸ್ವಾತಂತ್ರ್ಯ ಇದೆ. ಮೇಕೆದಾಟು ಯೋಜನೆಯ ಲಾಭ ನಷ್ಟಗಳು ಏನು ಎಂದು ತಮಿಳುನಾಡಿನವರೆಗೂ ಗೊತ್ತಿದೆ. ಆದರೂ ರಾಜಕೀಯಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದರು.
ಬೇಕಾದರೆ ಅಲ್ಲಿಂದ ಒಂದು ನಿಯೋಗ ಇಲ್ಲಿಗೆ ಬರಲಿ. ನಾನು ಇಲ್ಲಿನ ವಾಸ್ತವ ವಿಚಾರಗಳನ್ನು ವಿವರಿಸಿ, ಮನವರಿಕೆ ಮಾಡಿಕೊಡುತ್ತೇನೆ. ಯೋಜನೆಯಿಂದಾಗುವ ಅನುಕೂಲತೆಗಳ ಬಗ್ಗೆ ತಿಳುವಳಿಕೆ ನೀಡುತ್ತೇನೆ ಎಂದರು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ನಿನ್ನೆ ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ತಾವು ಮಾತನಾಡುತ್ತಾ, ಮೆಟ್ರೋ ಯೋಜನೆ ವಿಚಾರದಲ್ಲಿ ಸಮ ಪಾಲು ನೀಡಲು ಮನವಿ ಮಾಡಿದ್ದೇನೆ. ಒಟ್ಟು ಮೆಟ್ರೋ ಯೋಜನೆ 500 ಕಿ.ಮೀ.ಗಳಷ್ಟು ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಬಾಕಿ ಇರುವ ಯೋಜನೆಗಳಿಗೂ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದರು.
ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ಗೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಅದಕ್ಕಾಗಿ ನಿನ್ನೆ ಪ್ರಧಾನಿಯವರ ಜೊತೆ ಖಾಸಗಿಯಾಗಿ ಮಾತನಾಡುವಾಗ, ನಾನು ಮತ್ತು ಸಚಿವ ಕೃಷ್ಣಭೈರೇಗೌಡ ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಬೇರೆ ರಾಜ್ಯಗಳ ನಗರಗಳಲ್ಲಿ ಶೇ. 15ರಿಂದ 20ರಷ್ಟು ರಸ್ತೆಗಳಿವೆ. ಬೆಂಗಳೂರಿನಲ್ಲಿ ಶೇ. 8ರಷ್ಟು ಮಾತ್ರ ರಸ್ತೆ ಇದೆ. ಇಲ್ಲಿ ಒಂದು ಚದರ ಅಡಿ ಜಾಗಕ್ಕೆ 50,000 ಹಣ ನೀಡಬೇಕು. ಡಬಲ್ ಡೆಕ್ಕರ್ ಯೋಜನೆಗೆ ನಾವು ವೆಚ್ಚ ಭರಿಸುತ್ತೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ರಾಜ್ಯದಿಂದ ಸರ್ವಪಕ್ಷ ನಿಯೋಗ ಕರೆ ತರುತ್ತೇನೆ ಎಂದಾಗ ಅದಕ್ಕೆ ಪ್ರಧಾನಿಯರು ಒಪ್ಪಿದ್ದಾರೆ ಎಂದು ಹೇಳಿದರು.ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ತಮ ನಡುವೆ ಇದ್ದಂತಹ ಸೌಹಾರ್ದತೆಯ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯದ ಪ್ರಜಾಸೇವಕನಾಗಿ, ಪ್ರತಿನಿಧಿಯಾಗಿ ಸರ್ಕಾರಕ್ಕೆ, ರಾಜ್ಯಕ್ಕೆ ಹಿತವಾಗುವ ನಿಟ್ಟಿನಲ್ಲಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಚರ್ಚೆಯಾಗುವುದಾದರೆ ಆಗಲಿ ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಕುರಿತಂತೆ ಮಾಹಿತಿ ಪಡೆದು ಪ್ರತಿಕ್ರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿಯನ್ನು ಪಾವತಿಸದೇ ಇರುವ ಬಗ್ಗೆ ಪ್ರತಿಕ್ರಿಸಿದ ಅವರು, ಸುವರ್ಣಸೌಧ ಒಂದೇ ಅಲ್ಲ, ಬರಗಾಲ ಸಂದರ್ಭದಲ್ಲಿ ರೈತರ ಕೃಷಿ ಪಂಪ್ಸೆಟ್ಗೆ ಹೆಚ್ಚಿನ ವಿದ್ಯುತ್ ಬಳಕೆಯಾಗಿದೆ. 22 ಸಾವಿರ ರೂ.ಗಳಷ್ಟಿದ್ದ ಅನುದಾನ 30,000 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ವಿದ್ಯುತ್ ಬಿಲ್ ಬಾಕಿ ಜಾಸ್ತಿಯಾಗಿದೆ ಎಂದು ಹೇಳಿದರು.
