Homeರಾಜ್ಯನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ : ತೀವ್ರ ಬೇಸರ ವ್ಯಕ್ತಪಡಿಸಿದ ಹೆಚ್ಡಿಕೆ

ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ : ತೀವ್ರ ಬೇಸರ ವ್ಯಕ್ತಪಡಿಸಿದ ಹೆಚ್ಡಿಕೆ

ಹಾಸನ. ನ.14 : ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸುವುದು ನಿಜಕ್ಕೂ ಬಹಳ ನೋವಿನ ಸಂಗತಿ ಎಂದು ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು. ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ದೇವರು ಎಲ್ಲರಿಗೂ ಒಂದೇ. ಶ್ರೀ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಆಹ್ವಾನ ಬಂದಿತ್ತು. ಅದರಂತೆಯೇ ಅವರು ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲು ಉದ್ದೇಶಿಸಿದ್ದರು. ಆದರೆ ಏಕಾಏಕಿ ಬಾಗಿಲಿಗೆ ಬೀಗ ಹಾಕಿ ತಾಯಿಯ ದರ್ಶನ ನಿರಾಕರಣೆ ಮಾಡಿರುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಇವತ್ತು ರಾಜಕೀಯ ಚರ್ಚೆ ಮಾಡಲು ನನಗೆ ಇಷ್ಟವೂ ಇಲ್ಲ. ಆದರೆ ಈ ಘಟನೆ ನನ್ನ ಮನಸ್ಸಿಗೆ ನೋವು ಉಂಟುಮಾಡಿದೆ ಎಂದರು ಕೇಂದ್ರ ಸಚಿವರು. ಈ ಗ್ರಾಮದ ಜೊತೆ ನನಗೆ ಬಹಳ ಆತ್ಮೀಯ ಬಾಂಧವ್ಯ ಇದೆ. ಅಲ್ಲಿನ ಜನರು ನನಗೆ ಆತ್ಮೀಯರು. ದೇವಸ್ಥಾನದ ಪ್ರಾರಂಭೋತ್ಸವದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಸದಾ ನನ್ನ ಬೆಂಬಲಿಸುವ ಮತ್ತು ದೊಡ್ಡ ಮಟ್ಟದಲ್ಲಿ ನನಗೆ ಮತ ಕೊಟ್ಟು ಗೆಲ್ಲಿಸುವ ಗ್ರಾಮ ಕುರುಬರಹಳ್ಳಿ. ಇಂತಹ ಘಟನೆಗಳ ಅಗತ್ಯ ಇರಲಿಲ್ಲ ಎಂದರು ಸಚಿವರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ಹೋಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಪ್ರತಿಪಕ್ಷಗಳ ಕಾರ್ಯಕರ್ತರನ್ನು ಭಯಭೀತರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡವಳಿಕೆ, ರೌಡಿಸಂ, ದೌರ್ಜನ್ಯದ ಬಗ್ಗೆ ನಾನು ಈಗಲೇ ಏನನ್ನೂ ಹೇಳಲು ಹೋಗಲ್ಲ. ಅಲ್ಲಿಯ ಜನ ಬುದ್ದಿ ಕಲಿಸುವ ದಿನ ದೂರವಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

2004ರಲ್ಲಿ ಇದೇ ರಾಮನಗರ ಜಿಲ್ಲೆಯ ಕೂಟಗಲ್ಲು ಹೊಸೂರು ಎನ್ನುವ ಗ್ರಾಮದಲ್ಲಿ ಕಾಂಗ್ರೆಸ್‌ನವರು ನಾನು ದೇವಾಲಯಕ್ಕೆ ಬರುವಾಗ ದಬ್ಬಾಳಿಕೆ ನಡೆಸಿ ದೇಗುಲಕ್ಕೆ ಬೀಗ ಹಾಕಿದ್ದರು. ದೇವರ ಅನುಗ್ರಹ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತು? ನಂತರ ನಡೆದ ಚುನಾವಣೆಯಲ್ಲಿ ನನಗೆ 25 ಸಾವಿರಕ್ಕೂ ಹೆಚ್ಚು ಬಹುಮತದಿಂದ ಜನರು ನನ್ನನ್ನು ಗೆಲ್ಲಿಸಿದರು. ಈ ಬಾರಿಯೂ ಅಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ನವರು ಸೃಷ್ಟಿ ಮಾಡಿದ್ದಾರೆ. ಬದಲಾವಣೆಯ ಪರ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ನಾಂದಿ ಹಾಡಿದ್ದಾರೆ. ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ ಎಂದು ಸಚಿವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗೆ ಕೆಲಸ ಮಾಡುವುದಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಕೆಲವರು ನನಗೆ ಹೇಳುತ್ತಿದ್ದಾರೆ. ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ಗಮನಿಸಿದ್ದೇನೆ. ಅವರ ಮಾತಿಗೂ ಕೃತಿಗೂ ನಡವಳಿಕೆ ಹೇಗಿರುತ್ತೆ ಎಂಬುದನ್ನು ನೋಡೋಣ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.

RELATED ARTICLES

Latest News