ಬೆಂಗಳೂರು, ಸೆ.29- ನೈಸ್ ಯೋಜನೆ ದೇಶದ 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು ಎಂದು ಕೇಂದ್ರ ಕೈಗಾರಿಕಾ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ನೇರ ಆರೋಪ ಮಾಡಿದ್ದಾರೆ. ಖಾಸಗಿ ಹೊಟೇಲ್ನಲ್ಲಿಂದು ನಡೆದ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಚ್ಡಿಕೆ, ನೈಸ್ ಯೋಜನೆಯ ಮೂಲವೇ ಬೇರೆ. ಒಪ್ಪಂದವಾಗಿದ್ದೇ ಬೇರೆ ಎಂದು ಹೇಳಿದ್ದಾರೆ. ನೈಸ್ ಯೋಜನೆಗೂ ದೇವೇಗೌಡರು ಅಂದು ಸಹಿ ಹಾಕಿದ್ದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ದಾಖಲೆ ಸಮೇತ ಅವರು ಬಿಡುಗಡೆ ಮಾಡಿದ್ದಾರೆ. ಬೇಕಿದ್ದರೆ ರಾಜ್ಯ ಸರ್ಕಾರ ವಿಧಾನಸೌಧದ ಮೆಟ್ಟಿಲ ಮೇಲೆ ಇದರ ಬಗ್ಗೆ ಚರ್ಚೆ ಮಾಡಲಿ. ಅದಕ್ಕೆ ನಾನು ಸಿದ್ಧ ಎಂದು ನೇರವಾಗಿ ಸಿಎಂಗೆ ಪಂಥಾಹ್ವಾನ ನೀಡಿದ್ದಾರೆ.
ನೈಸ್ ಯೋಜನೆ ದೇವೇಗೌಡರು, ಕುಮಾರಸ್ವಾಮಿ ಅವರ ಕೂಸು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನೇರ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.ಈಗಾಗಲೇ ನ್ಯಾಯಾಲಯ ನೈಸ್ ಯೋಜನೆ ಕುರಿತಂತೆ ಹಲವಾರು ಲೋಪಗಳನ್ನು ಗಮನಿಸಿದೆ. ಕಳೆದ 1995ರಲ್ಲಿ ನೈಸ್ ಯೋಜನೆ ಕುರಿತಂತೆ ಎಲ್ಲ ವಿವರಗಳನ್ನೂ ಕುಮಾರಸ್ವಾಮಿ ಅವರು ಇಂದಿಲ್ಲಿ ಬಹಿರಂಗಪಡಿಸಿದ್ದಾರೆ.
ಮೊದಲು ನೈಸ್ ಕಂಪೆನಿ ಇರಲಿಲ್ಲ. ವಿಹೆಚ್ಬಿ, ಕಲ್ಯಾಣಿ ಗ್ರೂಪ್ ಆಫ್ ಕಂಪೆನಿ, ಸ್ಲ್ಯಾಬ್ ಎಂಜಿನಿಯರಿಂಗ್ ಕಂಪೆನಿ ಜತೆ ದೇವೇಗೌಡರು ಸಹಿ ಹಾಕಿದ್ದರು. ಫೆ.20ರ 1995ರಲ್ಲಿ ಈ ಒಪ್ಪಂದ ಆಗಿತ್ತು. ಆಗಿನ ಮೇ ತಿಂಗಳಲ್ಲೇ ಈ ಕಂಪೆನಿ ಹಲವಾರು ಪತ್ರ ವ್ಯವಹಾರ ಮಾಡಿತ್ತು. ನಂತರ ಭೂಮಿ ಸ್ವಾಧೀನ ಕುರಿತಂತೆ ಡಿಪಿಆರ್ ಮತ್ತು ಲಾಭ-ನಷ್ಟದ ಬಗ್ಗೆ ಚರ್ಚೆಯೂ ನಡೆದಿತ್ತು.
8-11-1995ರಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. 30 ವರ್ಷ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲಾಗಿತ್ತು. ಭೂಮಿ ಸ್ವಾಧೀನ ವೆಚ್ಚವನ್ನು ಅವರೇ ಭರಿಸಬೇಕು ಎಂಬ ನಿಯಮಾನುಸಾರ ಅನುಮತಿ ನೀಡಲಾಗಿತ್ತು. ನಂತರ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು-ಮೈಸೂರು ಎಕ್್ಸಪ್ರೆಸ್ ಯೋಜನೆಗೆ ಭಾರತ್ ಫೋರ್ ಲಿಮಿಟೆಡ್ಗೆ 1997ರಲ್ಲಿ ಮಂಜೂರಾತಿ ನೀಡಿದ್ದರು. ಆಗ ಕೂಡ ಇನ್ನೂ ನೈಸ್ ಬಂದಿರಲಿಲ್ಲ.
3-4-1997ರಲ್ಲಿ ಈ ಬಗ್ಗೆ ಅಗ್ರಿಮೆಂಟ್ ಕೂಡ ಆಯಿತು. ಆಗ ಡಿಪಿಆರ್ನಲ್ಲಿ ಫಲವತ್ತಾದ ಯಾವುದೇ ಭೂಮಿಯನ್ನು ಕೂಡ ಗುರುತಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಯೋಜನೆಗಾಗಿ ಉತ್ತಮ ಕೃಷಿ ಭೂಮಿಯನ್ನು ಗುರುತಿಸದೆ, ಬರಡು ಭೂಮಿಯನ್ನು ಬಳಸಬೇಕೆಂಬ ನಿಯಮವಿತ್ತು. ರಸ್ತೆ ಕಾಮಗಾರಿಗೆ 6,999 ಎಕರೆ ಭೂಮಿಗೆ ಬದ್ಧತೆ ಮಾಡಲಾಗಿತ್ತು. ಫ್ರೇಮ್ವರ್ಕ್ ಒಪ್ಪಂದ ಮಾಡಿಕೊಂಡು ಯಾವುದೇ ನಿಯಮ ಉಲ್ಲಂಘಿಸಬಾರದು ಹಾಗೂ ಕೆರೆಗಳನ್ನು ಮುಟ್ಟಬಾರದು ಎಂಬ ಷರತ್ತುಗಳಿದ್ದವು ಎಂದು ವಿವರಿಸಿದರು.
1998ರಲ್ಲಿ ವಿದೇಶಿ ಕಂಪನಿ ಯೋಜನೆಯಿಂದ ಹಿಂದೆ ಸರಿದ ಬಳಿಕ ನೈಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. 2002ರ ಆಗಸ್ಟ್ ನಲ್ಲಿ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ಹೆಸರಿನಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಯಿತು. ಬಳಿಕ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಪ್ರಾಧಿಕಾರ ರಚಿಸಲಾಯಿತು. ಆ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದು, ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು ಎಂದು ಅವರು ಹೇಳಿದರು.
ಯೋಜನೆಯ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನಂತರದ ಹಂತಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. 2004ರಲ್ಲಿ ಯೋಜನೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದ್ದು, ಹೈಕೋರ್ಟ್ ಈ ಬದಲಾವಣೆಯನ್ನು ಅಕ್ರಮ ಎಂದು ಹೇಳಿರುವುದಾಗಿ ತಿಳಿಸಿದರು.ತಾವು 2006-07ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದೆ. ಫ್ರೇಮ್ವರ್ಕ್ ಒಪ್ಪಂದದಂತೆ ಮಾತ್ರ ಯೋಜನೆ ಮುಂದುವರಿಯಬೇಕು ಹಾಗೂ ಅದರಲ್ಲಿ ಬದಲಾವಣೆ ಮಾಡಬಾರದು ಎಂಬ ತೀರ್ಮಾನ ಕೈಗೊಂಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.
ನೈಸ್ ಯೋಜನೆಯ ವ್ಯಾಪ್ತಿಯಲ್ಲಿನ ಭೂಮಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ ಅವರು, 2003ರಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಇದ್ದ ಆಸ್ತಿ ಮೌಲ್ಯ 2023ರಲ್ಲಿ 1,413 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ದಾಖಲೆಗಳನ್ನು ಉಲ್ಲೇಖಿಸಿದರು. ಈ ಬೆಳವಣಿಗೆಗೆ ಯೋಜನೆಯ ವಿನ್ಯಾಸ ಬದಲಾವಣೆ ಕಾರಣ ಎಂದು ಅವರು ಆರೋಪಿಸಿದರು.
ಸಿದ್ದಗಂಗಾ ಮಠಕ್ಕೆ ಸೇರಿದ ಭೂಮಿಯ ವಿಚಾರವನ್ನೂ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮಠಕ್ಕೆ ಸೇರಿದ ಭೂಮಿಯನ್ನು ಯೋಜನೆಗಾಗಿ ಪಡೆದುಕೊಳ್ಳಲಾಗಿತ್ತು. ರಸ್ತೆಗಾಗಿ ಬಳಕೆಯಾದ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ವಾಪಸ್ ನೀಡುವಂತೆ ಮಠದ ಸ್ವಾಮೀಜಿಗಳು ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಈ ಕುರಿತು ಆಡಿಯೋವನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಕುಟುಂಬದವರು ನೈಸ್ ಯೋಜನೆಯ ವ್ಯಾಪ್ತಿಗೆ ಬರುವ ಭೂಮಿಯನ್ನು ಖರೀದಿಸಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿರುವುದಾಗಿ ಕುಮಾರಸ್ವಾಮಿ ಹೇಳಿದರು.
ನೈಸ್ ಯೋಜನೆಗಾಗಿ ಅಧಿಸೂಚನೆಗೊಂಡಿದ್ದ ಭೂಮಿಯನ್ನು 2004ರಲ್ಲಿ ಡಿ.ಕೆ. ಸುರೇಶ್ ಖರೀದಿಸಿದ್ದಾರೆ. ನಂತರ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಲು ಅರ್ಜಿ ಸಲ್ಲಿಸಲಾಗಿತ್ತು. 2008ರಲ್ಲಿ ಪರಿವರ್ತನೆಗೆ ಅನುಮತಿ ಪಡೆಯಲಾಗಿದ್ದು, 2011ರಲ್ಲಿ ಶೋಭಾ ಡೆವಲಪರ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಳಿಕ ನೈಸ್ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ನೈಸ್ ಯೋಜನೆಗೆ ಅಧಿಸೂಚನೆಯಾಗಿದ್ದ ಭೂಮಿಗೆ ಸಂಬಂಧಿಸಿದಂತೆ ಇಂತಹ ಅನುಮತಿಗಳು ಹೇಗೆ ದೊರಕಿದವು ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.ನೈಸ್ ಯೋಜನೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಂಡಿರುವುದನ್ನು ಪ್ರಶಂಸಿಸಿದ ಕುಮಾರಸ್ವಾಮಿ, 2018ರಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ನೈಸ್ ಸಂಸ್ಥೆಯ ವಿರುದ್ಧ ಸದನ ಸಮಿತಿ ನೀಡಿದ್ದ ವರದಿಯಲ್ಲಿ ನಿಯಮ ಉಲ್ಲಂಘನೆಗಳ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಹೇಳಿದರು.
ನೈಸ್ ಯೋಜನೆಯಲ್ಲಿ ಮೂರು ಲಕ್ಷ ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪವನ್ನೂ ಕುಮಾರಸ್ವಾಮಿ ಮಾಡಿದರು.ಯೋಜನೆಯಡಿ ರೈತರ ಭೂಮಿಯನ್ನು ಪಡೆದುಕೊಂಡು ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಯೋಜನೆಯಡಿ 101 ಕಿಲೋಮೀಟರ್ ರಸ್ತೆ ನಿರ್ಮಿಸಬೇಕಿದ್ದರೂ ಇನ್ನೂ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಕಿಲೋಮೀಟರ್ ರಸ್ತೆ ಮಾತ್ರ ನಿರ್ಮಿಸಲಾಗಿದೆ. ರೈತರ ಭೂಮಿಯನ್ನು ಪಡೆದುಕೊಂಡು ಯೋಜನೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.
ನೈಸ್ ಯೋಜನೆಯ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಭೂಮಿಯನ್ನು ಉಳಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದ ಸಂಪತ್ತನ್ನು ಯಾರೇ ಲೂಟಿ ಮಾಡಿದರೂ ಅದರ ವಿರುದ್ಧ ಧ್ವನಿ ಎತ್ತುವುದಾಗಿ ಹೇಳಿದರು.ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈಸ್ ಯೋಜನೆಯನ್ನು ರದ್ದುಪಡಿಸಲು ಪ್ರಯತ್ನಿಸಿದ್ದೆ. ಆದರೆ ಅಗತ್ಯ ಸಹಕಾರ ದೊರೆಯಲಿಲ್ಲ. ಇದೀಗ ಜನರು ನೀಡಿರುವ ಅವಕಾಶವನ್ನು ಬಳಸಿಕೊಂಡು ಸರ್ಕಾರ ಯೋಜನೆಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು..
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರು ನೆರವು ಕೋರಿ ತಮ್ಮನ್ನು ಸಂಪರ್ಕಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು. ಸರ್ಕಾರ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಈ ವಿಚಾರವನ್ನು ತಾವು ಸುಮ್ಮನೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಒತ್ತಿ ಹೇಳಿದರು.
