ಬೆಂಗಳೂರು, ಸೆ.29- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸಿದ್ದು, ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಮುಗಿದ ಬಳಿಕ ನಿಯೋಜನೆ ಮಾಡುವ ಸಾಧ್ಯತೆ ಇದೆ. ಖಾಲಿ ಇರುವ ಎರಡು ಸ್ಥಾನಗಳ ಪೈಕಿ ಒಂದನ್ನು ಪರಿಶಿಷ್ಟ ಪಂಗಡ ಹಾಗೂ ಮತ್ತೊಂದು ಸ್ಥಾನವನ್ನು ಕುರುಬ ಸಮುದಾಯಕ್ಕೆ ಮೀಸಲಿಡಲಾಗಿದೆ. ಈ ನಡುವೆ ಹಿರಿಯ ಶಾಸಕರ ಒತ್ತಡಕ್ಕೆ ಮಣಿದು ಬದಲಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ಕೂಡ ಚರ್ಚೆಗಳಾಗಿವೆ.
ಈವರೆಗಿನ ಮಾಹಿತಿ ಪ್ರಕಾರ ಪರಿಶಿಷ್ಟ ಪಂಗಡದ ಕೋಟಾದ ಸ್ಥಾನಕ್ಕೆ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ಅವರ ಹೆಸರು ಬಹುತೇಕ ಖಚಿತವಾಗಿದೆ. ಇದೇ ವೇಳೆ ಕುರುಬ ಸಮುದಾಯದಿಂದ ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ನಡುವೆ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರು ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದರೆ ತಮಗೆ ಪುತ್ರ ಹಾಗೂ ಶಾಸಕ ಪ್ರಿಯಕೃಷ್ಣ ಅವರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರಸ್ತುತ ಪ್ರಿಯಕೃಷ್ಣ ಅವರು ದೆಹಲಿಯಲ್ಲೇ ಉಳಿದು ಸಚಿವ ಸ್ಥಾನಕ್ಕಾಗಿ ವರಿಷ್ಠರ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೂಡ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಪ್ರಸ್ತಾಪವಾಗಿತ್ತು. ಆದರೆ ಬಸವರಾಜ ಶಿವಣ್ಣನವರ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನೆಲೆಗೆ ತಂದಿದ್ದಾರೆ. ತಾವು ಸೂಚಿಸಿದವರ ಬದಲಿಗೆ ಬೇರೆ ಶಾಸಕರಿಗೆ ಅವಕಾಶ ನೀಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಹಿಳಾ ಕೋಟಾದಡಿ ಹಲವು ಶಾಸಕರ ಹೆಸರುಗಳು ಚರ್ಚೆಯಲ್ಲಿದ್ದರೂ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಮುಂಚೂಣಿಯಲ್ಲಿತ್ತು. ನಯನಾ ಮೋಟಮ ಕೂಡ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು.
ಈ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದರಿಂದ ತೆರವಾಗಿರುವ ಸ್ಥಾನವನ್ನು ಅದೇ ಸಮುದಾಯಕ್ಕೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಮಹಿಳಾ ಪ್ರಾತಿನಿಧ್ಯ, ಪರಿಶಿಷ್ಟ ಪಂಗಡದ ಕೋಟಾ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಅನ್ನಪೂರ್ಣ ತುಕಾರಾಂ ಅವರು ಮೊದಲ ಬಾರಿಗೆ ಶಾಸಕರಾಗಿದ್ದರೂ, ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು ನೀಡಬೇಕು ಹಾಗೂ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಪಾಡಬೇಕು ಎಂಬ ಕಾರಣಕ್ಕೆ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು 30ಕ್ಕೂ ಹೆಚ್ಚು ಶಾಸಕರು ವಿವಿಧ ಹಂತಗಳಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ದೆಹಲಿಯಲ್ಲಿ ತಂಗಿದ್ದು, ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಬೆನ್ನು ಬಿದ್ದಿದ್ದಾರೆ.ಅಂತಿಮವಾಗಿ ಇಬ್ಬರಿಗೆ ಮಾತ್ರ ಅವಕಾಶ ದೊರೆಯಲಿದೆ. ಹೀಗಾಗಿ ಸಂಪುಟಕ್ಕೆ ಸೇರ್ಪಡೆಯಾಗುವ ಆ ಇಬ್ಬರು ಶಾಸಕರು ಯಾರು ಎಂಬುದು ಇದೀಗ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.
