ಬೆಂಗಳೂರು,ಮಾ.24- 24 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಸಲೀಸಾಗಿ ಮಾಡಿ ಮುಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಕಬ್ಬಿಣದ ಕಡಲೆಯಾಗಿದ್ದು, ರಾಜ್ಯನಾಯಕರು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಕೈಚೆಲ್ಲಿದ್ದಾರೆ.ಬಾಕಿ ಇರುವ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿಗೆ ತುಕಾರಾಂ, ಚಾಮರಾಜನಗರಕ್ಕೆ ಮಾಜಿ ಶಾಸಕ ನಂಜುಂಡಸ್ವಾಮಿಯವರ ಪೈಪೊಟಿಯನ್ನು ಹತ್ತಿಕ್ಕಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರಿಗೆ ತೀವ್ರ ಪೈಪೊಟಿ ನೀಡಿರುವ ಮಾಜಿ ಸಚಿವ ಎಂ.ಅರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಟಿಕೆಟ್ ಗಿಟ್ಟಿಸುವುದು ಖಚಿತವಾಗಿದೆ.ಕೋಲಾರ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿರುವುದರಿಂದಾಗಿ ರಾಜ್ಯ ನಾಯಕರಿಗೆ ತಲೆನೋವು ಎದುರಾಗಿದೆ.
ಅತೀ ಹೆಚ್ಚು ಆಕಾಂಕ್ಷಿಗಳಿದ್ದ ಕೋಲಾರ ಲೋಕಸಭಾ ಕ್ಷೇತ್ರ ಪೈಪೊಟಿ ಹಾಗೂ ಜಿದ್ದಾಜಿದ್ದಿನ ಕಣವಾಗಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕದೊಡ್ಡಣ್ಣ, ರಾಜ್ಯ ಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಎಡಗೈ ಸಮುದಾಯದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಬಲಗೈ ಸಮುದಾಯದಿಂದ ದಲಿತ ಮುಖಂಡ ಮುನಿಯಪ್ಪ, ಡಾ.ಡಿ.ಸಿ.ಮುದ್ದುಗಂಗಾಧರ್ ಟಿಕೆಟ್ ಬಯಸಿದ್ದಾರೆ.ಜಿಲ್ಲೆಯಲ್ಲಿ 30 ವರ್ಷ ಸೋಲಿಲ್ಲದಂತೆ ಚುನಾವಣೆ ಎದುರಿಸಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಒಳಬಣಗಳೇ ಠಕ್ಕರ್ ನೀಡಿ ಸೋಲಿನ ರುಚಿ ತೋರಿಸಿದ್ದವು.
ವಿಧಾನಸಭಾ ಚುನಾವಣೆಯಲ್ಲಿ ಈ ಅಸಮಾಧಾನ ಸರಿಹೋಗಬಹುದು ಎಂಬ ನಿರೀಕ್ಷೆ ಇತ್ತಾದರೂ ಮತ್ತೆ ಅದು ಭುಗಿಲೆದ್ದಿದೆ. ಕೆ.ಎಚ್.ಮುನಿಯಪ್ಪ ಅವರಿಗೆ ಅಥವಾ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಸೋಲಲಿದ್ದಾರೆ ಎಂದು ಮಾಜಿ ಸಚಿವ ರಮೇಶ್ಕುಮಾರ್, ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತನೂರು ಮಂಜುನಾಥ್, ನಂಜೇಗೌಡ ಮತ್ತಿತರರು ದೆಹಲಿಗೆ ನಿಯೋಗ ತೆರಳಿ ಹೈಕಮಾಂಡ್ಗೆ ದೂರು ನೀಡಿ ಬಂದಿದ್ದಾರೆ.
ಭಿನ್ನಮತೀಯರ ಈ ಬಣವನ್ನು ಎದುರು ಹಾಕಿಕೊಂಡೇ ರಾಜಕಾರಣ ಮಾಡಬೇಕೆಂದು ಜಿದ್ದಿಗೆ ಬಿದ್ದಿರುವ ಕೆ.ಎಚ್.ಮುನಿಯಪ್ಪ ತೀವ್ರ ವಿರೋಧದ ನಡುವೆಯೂ ತಮ್ಮ ಅಳಿಯನಿಗೇ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
ನಿನ್ನೆ ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯದ ನಾಯಕರು ಹೈಕಮಾಂಡ್ಗೆ ಶಿಫಾರಸು ಮಾಡಿದ್ದು, ಯಾರಿಗೇ ಟಿಕೆಟ್ ಕೊಟ್ಟರೂ ಅದನ್ನು ಸ್ವಾಗತಿಸುವುದಾಗಿ ಹೇಳಿ ಕೈ ತೊಳೆದುಕೊಂಡಿದ್ದಾರೆ.
ನಿರೀಕ್ಷೆಯಂತೆಯೇ ಎಲ್ಲವೂ ನಡೆದಿದ್ದರೆ ನಿನ್ನೆ ಪ್ರಕಟಗೊಂಡ 46 ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜ್ಯದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯೂ ಘೋಷಣೆಯಾಗಬೇಕಿತ್ತು. ಆದರೆ ಸತತ ಸಂಧಾನದ ಹೊರತಾಗಿಯೂ ರಾಜ್ಯ ನಾಯಕರಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.
ಹೀಗಾಗಿ ನಾಲ್ಕೂ ಕ್ಷೇತ್ರಗಳೂ ಮತ್ತೆ ಬಾಕಿ ಉಳಿದುಕೊಂಡಿವೆ.