ಹಾಸನ,ಸೆ.30- ಹಾಸನಾಂಬ ದೇವಿ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಬೆಂಗಳೂರು-ಹಾಸನ, ಬೆಂಗಳೂರು- ಮೈಸೂರು, ಹಾಸನ-ಮೈಸೂರು, ಮಂಗಳೂರು-ಹಾಸನ, ಮಂಗಳೂರು ಹಾಗೂ ಹುಬ್ಬಳ್ಳಿ ಹಾಸನ ಹುಬ್ಬಳ್ಳಿ ಮಾರ್ಗಗಳಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 12ರವರೆಗೆ ವಿಶೇಷ ರೈಲುಗಳನ್ನು ಓಡಿಸುವಂತೆ ಅವರು ಕೋರಿದ್ದಾರೆ.
ಹಾಸನ ಮಾರ್ಗವಾಗಿ ಸಂಚರಿಸುವ ನಿಯಮಿತ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವುದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮುಂಜಾನೆ ಹಾಗೂ ತಡರಾತ್ರಿ ರೈಲು ಸೇವೆ ಒದಗಿಸುವುದು ಮತ್ತು ಹಾಸನ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಟಿಕೆಟ್ ಹಾಗೂ ವಿಚಾರಣಾ ಕೌಂಟರ್ಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ.
ಹೆಚ್ಚುವರಿ ಸೌಲಭ್ಯಕ್ಕೆ ಮನವಿ :
ಮಹೋತ್ಸವದ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಸಾಕಷ್ಟು ಆರ್ಪಿಎಫ್ ಸಿಬ್ಬಂದಿ ನಿಯೋಜನೆ, ವೈದ್ಯಕೀಯ ನೆರವು, ಜನದಟ್ಟಣೆ ನಿಯಂತ್ರಣ, ಕುಡಿಯುವ ನೀರು ಹಾಗೂ ಸ್ವಚ್ಛತಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ರೈಲುಗಳ ಮಾರ್ಗ, ಸಮಯ ಹಾಗೂ ಟಿಕೆಟ್ ಕಾಯ್ದಿರಿಸುವಿಕೆ ಕುರಿತು ಮಾಹಿತಿಯನ್ನು ಮುಂಚಿತವಾಗಿ ಪ್ರಕಟಿಸುವಂತೆಯೂ ಸಂಸದರು ತಿಳಿಸಿದ್ದಾರೆ.
ಪ್ರಯಾಣಿಕರ ಬೇಡಿಕೆ ಮತ್ತು ರೈಲುಗಳ ಕಾರ್ಯಾಚರಣೆಯ ಸಾಧ್ಯತೆಗಳನ್ನು ತಕ್ಷಣ ಪರಿಶೀಲಿಸಿ, ಪ್ರಸ್ತಾವನೆಯನ್ನು ನೈರುತ್ಯ ರೈಲ್ವೆ ಮುಖ್ಯ ಕಚೇರಿಗೆ ಸಲ್ಲಿಸುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಶೇಷ ರೈಲು ಸೇವೆಗಳಿಂದ ಭಕ್ತರಿಗೆ ಸುರಕ್ಷಿತ ಹಾಗೂ ಅನುಕೂಲಕರ ಪ್ರಯಾಣ ಸೌಲಭ್ಯ ದೊರೆಯುವುದರ ಜತೆಗೆ ಮಹೋತ್ಸವದ ಅವಧಿಯಲ್ಲಿ ರಸ್ತೆ ಸಂಚಾರದ ದಟ್ಟಣೆಯನ್ನೂ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.
