Homeರಾಷ್ಟ್ರೀಯಭಾರತೀಯ 'ಹೀರೋ' ಪೈಲಟ್‌ ಸ್ಮಿತ್ ಮಚ್ಚಾರ್‌ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಾಲ್ಯ ಸ್ನೇಹಿತ

ಭಾರತೀಯ ‘ಹೀರೋ’ ಪೈಲಟ್‌ ಸ್ಮಿತ್ ಮಚ್ಚಾರ್‌ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಾಲ್ಯ ಸ್ನೇಹಿತ

ಮುಂಬೈ, ಅ. 1 (ಪಿಟಿಐ): ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್‌ ನಡೆಸಿದ ಯತ್ನವನ್ನು ವಿಫಲಗೊಳಿಸಿ, ರಾತ್ರೋರಾತ್ರಿ ಹೀರೋ ಆಗಿ ಗುರುತಿಸಿಕೊಂಡಿರುವ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್‌ ಅವರನ್ನು ಅವರ ಬಾಲ್ಯದ ಸ್ನೇಹಿತ ಕೊಂಡಾಡಿದ್ದಾರೆ.

ಮಚ್ಚಾರ್‌ ಬಾಲ್ಯದಲ್ಲೇ ಸಮಯಪ್ರಜ್ಞೆಯನ್ನು ಮೆರೆದಿದ್ದರು ಎಂದು ಅವರ ಬಾಲ್ಯದ ಸ್ನೇಹಿತ ಪ್ರತೀಕ್‌ ಗಾಂಧಿ ಹೇಳಿದ್ದಾರೆ. ಅವರು ಮೊದಲಿನಿಂದಲೂ ಬಹಳ ಶಾಂತ ಮತ್ತು ಸಂಯಮದ ಸ್ವಭಾವದವರಾಗಿದ್ದರು. ನಮ್ಮ ವಸತಿ ಸಮುಚ್ಚಯದಲ್ಲಿದ್ದ ಅತ್ಯಂತ ವಿವೇಕಯುತ ಮತ್ತು ವ್ಯವಸ್ಥಿತ ಚಿಂತನೆಯ ಹುಡುಗ ಅವರಾಗಿದ್ದರು ಎಂದು ಮುಂಬೈನಲ್ಲಿ ಪೈಲಟ್‌ ಅವರ ಕುಟುಂಬದೊಂದಿಗೆ ಒಂದೇ ಕಟ್ಟಡದಲ್ಲಿ ವಾಸಿಸುತ್ತಿರುವ ಗಾಂಧಿ ತಿಳಿಸಿದರು.

ನಾವು ಮೊದಲು ಈ ಸುದ್ದಿ ಕೇಳಿದಾಗ ನಮಗೆಲ್ಲರಿಗೂ ಆಘಾತವಾಯಿತು. ಆರಂಭದಲ್ಲಿ, ಆತನೇ ನಮ್ಮ ಸ್ಮಿತ್‌ ಎಂದು ನಮಗೆ ತಿಳಿದಿರಲಿಲ್ಲ. ಈಗ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೈಲಟ್‌ ಅವರ ಸ್ನೇಹಿತ ಹೇಳಿದರು.

ಅವರ ಕುಟುಂಬದಿಂದ ನಮಗೆ ಬೇರೆ ಯಾವುದೇ ಸುದ್ದಿ ಬಂದಿಲ್ಲ. ಅವರು ಇಲ್ಲಿಲ್ಲ; ಎಲ್ಲರೂ ದುಬೈನಲ್ಲಿ ನೆಲೆಸಿದ್ದಾರೆ ಎಂದು ಗಾಂಧಿ ಹೇಳಿದರು. ಸ್ಮಿತ್‌ ಅವರ ನೆರೆಮನೆಯಲ್ಲಿದ್ದುಕೊಂಡು ಬಾಲ್ಯದಲ್ಲಿ ಅವರೊಂದಿಗೆ ಕ್ರಿಕೆಟ್‌ ಆಡಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಪೈಲಟ್‌ ಅವರನ್ನು ನಾಯಕ ಎಂದು ಬಣ್ಣಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಗಾಯಗೊಂಡಿದ್ದರೂ ಮಚ್ಚಾರ್‌ ಅವರು ಎದುರಾಳಿಯೊಂದಿಗೆ ಹೋರಾಡಿ, 9/11 ಮಾದರಿಯ ದುರಂತವನ್ನು ತಡೆಯುವಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ.

‘ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಒಬ್ಬ ನಾಯಕ (ಹೀರೋ)’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಅತ್ಯಂತ ಗಂಭೀರ ಅಪಾಯದ ಸಂದರ್ಭದಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ ಅವರು ಅಪಾರ ಧೈರ್ಯ ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದರು. ಕ್ಯಾಪ್ಟನ್‌ ಮಚ್ಚಾರ್‌ ಅವರ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.

RELATED ARTICLES
spot_img

Latest News