Homeಜಿಲ್ಲಾ ಸುದ್ದಿಗಳುಸಕಲೇಶಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಿ: ಹೆಚ್‌.ಡಿ. ರೇವಣ್ಣ

ಸಕಲೇಶಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಿ: ಹೆಚ್‌.ಡಿ. ರೇವಣ್ಣ

ಅರಸೀಕೆರೆ, ಅ. 1- ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಕಲೇಶಪುರ ತಾಲೂಕನ್ನೂ ಬರಪೀಡಿತ ಎಂದು ಘೋಷಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯ ಕೊರತೆಯಿಂದ ಸಕಲೇಶಪುರದ ಕಾಫಿ ತೋಟಗಳು ನಷ್ಟವಾಗುತ್ತಿವೆ. ಎರಡು-ಮೂರು ದಿನ ಮಳೆ ಬಾರದಿದ್ದರೂ ಕಾಫಿ ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ ತುರ್ತಾಗಿ ₹2ರಿಂದ ₹3 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಅಗತ್ಯವಿರುವ ಕಡೆ ಬೋರ್‌ವೆಲ್‌, ಪೈಪ್‌ಲೈನ್‌ ನಿರ್ಮಿಸಿ, ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಜಾನುವಾರುಗಳ ಮೇವು ಹಾಗೂ ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ₹5 ಕೋಟಿ ಪ್ರತ್ಯೇಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು 2.20 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ನಷ್ಟವಾಗಿದ್ದು, ರೈತರು ಮಾಡಿದ ಖರ್ಚಿನ ಆಧಾರದ ಮೇಲೆ ಪರಿಹಾರ ನೀಡಬೇಕು. ಕೇವಲ ₹2 ಸಾವಿರ ಪರಿಹಾರ ನೀಡುವುದರಿಂದ ರೈತರಿಗೆ ಪ್ರಯೋಜನವಿಲ್ಲ. ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ಮತ್ತೊಮ್ಮೆ ಒನ್‌ಟೈಮ್‌ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಭಾಗದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ 6ರಿಂದ 8 ತಿಂಗಳಿನಿಂದ ಪಿಂಚಣಿ ಸಿಗುತ್ತಿಲ್ಲ ಎಂಬ ದೂರುಗಳಿವೆ. ಜಿಲ್ಲಾಧಿಕಾರಿಗಳು ಪ್ರತಿದಿನ ಕಚೇರಿಯಲ್ಲಿ ಸಮಯ ಮೀಸಲಿಟ್ಟು ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಒತ್ತಾಯಿಸಿದರು.

2028ರ ವಿಧಾನಸಭಾ ಚುನಾವಣೆಯವರೆಗೆ ಸಾಮೂಹಿಕ ನಾಯಕತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ ಅವರು, ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕುಮಾರಸ್ವಾಮಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಗೆಲ್ಲಿಸುವ ಗುರಿಯೊಂದಿಗೆ ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.

RELATED ARTICLES
spot_img

Latest News