Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರು : ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯಾಧಿಕಾರಿಗಳು, ಇಬ್ಬರ ಬಂಧನ

ಚಿಕ್ಕಮಗಳೂರು : ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯಾಧಿಕಾರಿಗಳು, ಇಬ್ಬರ ಬಂಧನ

ಚಿಕ್ಕಮಗಳೂರು, ನ.17- ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಹಾಗೂ ಹಂಚಿಕೆ ಮಾಡುತ್ತಿದ್ದ ಜಾಲದ ಮೇಲೆ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಭಾನುವಾರ ಮಾಗಡಿ ಹ್ಯಾಂಡ್‌ಪೋಸ್ಟ್‌ ಸಮೀಪದ ರಾಜು ಅಲಿಯಾಸ್‌ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಒಂದು ಕೆ.ಜಿ. ಬೇಯಿಸಿದ ಜಿಂಕೆ ಮಾಂಸವನ್ನು ವಶಪಡಿಸಿಕೊಂಡರು.

ವಿಚಾರಣೆ ವೇಳೆ ಚಿಕ್ಕಮಗಳೂರು ನಗರದ ಟಿಪ್ಪುನಗರ ನಿವಾಸಿ ಕುಮಾರ್‌ ಪಿ. ಎಂಬಾತ ಮಾಂಸ ಮಾರಾಟ ಮಾಡಿರುವುದಾಗಿ ರಾಜು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೇಲೂರಿನ ಅಲಿ ಹಾಗೂ ಕಣಿವೆಕೆರೆಯ ಯೋಗಿಗೌಡ ಎಂಬುವವರ ಹೆಸರುಗಳು ಬೆಳಕಿಗೆ ಬಂದಿವೆ. ಇವರು ಮಾಂಸ ಪೂರೈಕೆ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪವಿದ್ದು, ತಲೆಮರೆಸಿಕೊಂಡಿದ್ದಾರೆ. ಬಂಧಿತ ರಾಜು ಹಾಗೂ ಕುಮಾರ್‌ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್‌, ವಲಯ ಅರಣ್ಯಾಧಿಕಾರಿ ಹರೀಶ್‌ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

RELATED ARTICLES

Latest News