Homeಅಂತಾರಾಷ್ಟ್ರೀಯವಿದೇಶಿಗರ ವೀಸಾ ಅವಧಿ ಮಿತಿ ಪ್ರಸ್ತಾವನೆ ರದ್ದುಗೊಳಿಸಿದ ಫೆಡರಲ್‌ ಕೋರ್ಟ್ : ಟ್ರಂಪ್‌ ಆಡಳಿತಕ್ಕೆ ಹಿನ್ನಡೆ

ವಿದೇಶಿಗರ ವೀಸಾ ಅವಧಿ ಮಿತಿ ಪ್ರಸ್ತಾವನೆ ರದ್ದುಗೊಳಿಸಿದ ಫೆಡರಲ್‌ ಕೋರ್ಟ್ : ಟ್ರಂಪ್‌ ಆಡಳಿತಕ್ಕೆ ಹಿನ್ನಡೆ

ವಾಷಿಂಗ್ಟನ್‌, ನ.17 (ಪಿಟಿಐ)- ವಿದೇಶಿ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಪತ್ರಕರ್ತರು ತಮ್ಮ ವೀಸಾಗಳ ಅಡಿಯಲ್ಲಿ ಅಮೆರಿಕದಲ್ಲಿ ಕಳೆಯಬಹುದಾದ ಸಮಯದ ಮಿತಿಯನ್ನು ನಿಗದಿಪಡಿಸುವ ಟ್ರಂಪ್‌ ಆಡಳಿತದ ಪ್ರಸ್ತಾವನೆಯನ್ನು ಅಮೆರಿಕದ ಫೆಡರಲ್‌ ನ್ಯಾಯಾಲಯವೊಂದು ರದ್ದುಗೊಳಿಸಿದೆ.

ಜುಲೈ ತಿಂಗಳಲ್ಲಿ ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಫೆಡರಲ್‌ ಅನುಮೋದನೆ ಪಡೆಯದ ಹೊರತು ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯುವುದನ್ನು ತಡೆಯುವ ಗುರಿಯನ್ನು ಹೊಂದಿರುವ ನೀತಿಯೊಂದನ್ನು ಪ್ರಸ್ತಾಪಿಸಿತ್ತು.

ಬೋಸ್ಟನ್‌ನ ಫೆಡರಲ್‌ ನ್ಯಾಯಾಧೀಶ ಎಫ್‌. ಡೆನ್ನಿಸ್‌ ಸೇಲರ್‌ ಅವರು ನೀಡಿದ ತೀರ್ಪಿನಲ್ಲಿ, ಈ ಪ್ರಸ್ತಾವನೆಯು ಸ್ವೇಚ್ಛಾಚಾರದಿಂದ ಕೂಡಿದೆ, ತರ್ಕಹೀನವಾಗಿದೆ, ವಿವೇಚನಾಧಿಕಾರದ ದುರುಪಯೋಗವಾಗಿದೆ ಮತ್ತು ಕಾನೂನಿಗೆ ಅನುಗುಣವಾಗಿಲ್ಲ ಎಂದು ಹೇಳಿ ಅದನ್ನು ರದ್ದುಗೊಳಿಸಿದ್ದಾರೆ.

“ಸ್ಪಷ್ಟವಾಗಿ ಹೇಳುವುದಾದರೆ, ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವಂತಹ ಚಟುವಟಿಕೆಯನ್ನು ಅಮೆರಿಕದ ಕಾಂಗ್ರೆಸ್‌ ಅನುಮತಿಸಲು ಮತ್ತು ಪ್ರೋತ್ಸಾಹಿಸಲು ಬಯಸಿತ್ತೋ, ಅದನ್ನೇ ತಡೆಯಲು ಅಥವಾ ನಿರುತ್ಸಾಹಗೊಳಿಸಲು ಈ ಪ್ರಸ್ತಾವನೆ ಪ್ರಯತ್ನಿಸುತ್ತಿದೆ” ಎಂದು ನ್ಯಾಯಾಧೀಶ ಸೇಲರ್‌ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಎಚ್‌-1ಬಿ ವೀಸಾ ಕಾರ್ಯಕ್ರಮವನ್ನು ದುರ್ಬಲಗೊಳಿಸುವಂತಹ ವ್ಯಾಪಕ ಮತ್ತು ಮಿತಿಯಿಲ್ಲದ ಅಧಿಕಾರವನ್ನು ಕಾನೂನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.ಈ ಪ್ರಸ್ತಾವಿತ ನಿಯಮವು ವಿದೇಶಿ ಪತ್ರಕರ್ತರು ಅಮೆರಿಕದಲ್ಲಿ ಉಳಿಯಬಹುದಾದ ಅವಧಿಯನ್ನು ಹಲವಾರು ವರ್ಷಗಳಿಂದ 240 ದಿನಗಳಿಗೆ (ಚೀನಾದ ಪತ್ರಕರ್ತರಿಗೆ 90 ದಿನಗಳಿಗೆ) ಇಳಿಸಲು ಉದ್ದೇಶಿಸಿತ್ತು.

ಅಲ್ಲದೆ, ಈ ನಿಯಮವು ಗ್ರೇಸ್‌ ಪಿರಿಯಡ್‌ (ಅಧ್ಯಯನ ಪೂರ್ಣಗೊಂಡ ನಂತರ ಅಥವಾ ಒಪಿಟಿ ಅವಧಿ ಮುಗಿದ ನಂತರ ದೇಶ ತೊರೆಯಲು ನೀಡಲಾಗುವ ಕಾಲಾವಕಾಶ) ಅನ್ನು 60 ದಿನಗಳಿಂದ 30 ದಿನಗಳಿಗೆ ಕಡಿತಗೊಳಿಸಿತ್ತು.

ಭಾಷಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ರಜಾದಿನಗಳು ಮತ್ತು ವಿರಾಮಗಳು ಸೇರಿದಂತೆ ಒಟ್ಟು 24 ತಿಂಗಳ ವಾಸ್ತವ್ಯದ ಮಿತಿಯನ್ನು ವಿಧಿಸಲಾಗಿತ್ತು. ಫೌಂಡೇಶನ್‌ ಫಾರ್‌ ಇಂಡಿಯಾ ಅಂಡ್‌ ಇಂಡಿಯನ್‌ ಡಯಾಸ್ಪೊರಾ ಸ್ಟಡೀಸ್‌ ಈ ಫೆಡರಲ್‌ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದೆ.

RELATED ARTICLES

Latest News