ತಿರುವನಂತಪುರಂ, ನ.17- ವಾರ್ಷಿಕ ಅಯ್ಯಪ್ಪ ಮಂಡಲ ಯಾತ್ರೆ ಆರಂಭವಾದ ಮೊದಲ ದಿನವೇ ಶಬರಿಮಲೆಗೆ ಅಯ್ಯಪ್ಪ ಭಕ್ತರ ಮಹಾಪ್ರವಾಹವೇ ಹರಿದುಬಂದಿದೆ. ಬೆಳಗಿನ ಜಾವ 3 ಗಂಟೆಗೆ ಗರ್ಭಗುಡಿ ತೆರೆಯುವುದರೊಂದಿಗೆ ಔಪಚಾರಿಕವಾಗಿ ಆರಂಭವಾದ ಯಾತ್ರೆಯ ಮೊದಲ ದಿನವೇ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಬರೋಬ್ಬರಿ 8ರಿಂದ 10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಾಲಯದ ಆಡಳಿತ ಮಂಡಳಿಯು ದರ್ಶನಕ್ಕಾಗಿ ಕಟ್ಟುನಿಟ್ಟಿನ ಮಿತಿಗಳನ್ನು ನಿಗದಿಪಡಿಸಿದ್ದರೂ ಜನಸಂದಣಿಯನ್ನು ನಿಯಂತ್ರಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ 70 ಸಾವಿರ ಭಕ್ತರಿಗೆ ಆನ್‌ಲೈನ್ ವರ್ಚುವಲ್ ಕ್ಯೂ ಮೂಲಕ ಹಾಗೂ 20 ಸಾವಿರ ಭಕ್ತರಿಗೆ ಸ್ಥಳದಲ್ಲೇ ಸ್ಪಾಟ್ ಬುಕಿಂಗ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮುಂಗಡ ಟಿಕೆಟ್ ಬುಕ್ ಮಾಡಿದ ಭಕ್ತರೊಂದಿಗೆ ಯಾವುದೇ ಬುಕಿಂಗ್ ಇಲ್ಲದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಏಕಾಏಕಿ ಆಗಮಿಸಿರುವುದರಿಂದ ಸರತಿ ಸಾಲು ಕಿಲೋಮೀಟರ್‌ಗಟ್ಟಲೆ ವಿಸ್ತರಿಸಿದೆ.
ವಿಶೇಷ ಬಸ್ ವ್ಯವಸ್ಥೆ
ಭಾರಿ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೀಲಕ್ಕಲ್ ಬಳಿ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪಂಪಾ ಮತ್ತು ನೀಲಕ್ಕಲ್ ನಡುವೆ ನಿರಂತರವಾಗಿ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ.
ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ಪೊಲೀಸ್ ಇಲಾಖೆ ಜಂಟಿಯಾಗಿ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಮಾಡಿವೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ದಣಿವಾರಿಸಲು ಸರತಿ ಸಾಲಿನ ಸಂಕೀರ್ಣಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಲಘು ಆಹಾರದ ಸೌಲಭ್ಯಗಳನ್ನು ಒದಗಿಸಲಾಗಿದೆ.
ಮಂಡಲ ಪೂಜೆ, ಮಕರವಿಳಕ್ಕು ಪ್ರಮುಖ ದಿನಾಂಕಗಳು
ಯಾತ್ರಾ ಋತುವಿನ ಪ್ರಮುಖ ಘಟ್ಟವಾದ ಮಂಡಲ ಪೂಜೆಯು ಡಿಸೆಂಬರ್ 27ರಂದು ನಡೆಯಲಿದ್ದು, ಅಂದು ರಾತ್ರಿ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಮಕರವಿಳಕ್ಕು ಯಾತ್ರೆಗಾಗಿ ಡಿಸೆಂಬರ್ 30ರಂದು ಮತ್ತೆ ದೇಗುಲವನ್ನು ತೆರೆಯಲಾಗುವುದು. ಜನವರಿ 14ರಂದು ಮಕರವಿಳಕ್ಕು ಉತ್ಸವ ನಡೆಯಲಿದ್ದು, ಜನವರಿ 30ರಂದು ಪ್ರಸಕ್ತ ಸಾಲಿನ ಯಾತ್ರಾ ಋತು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮತ್ತೆ ಮುಚ್ಚಲಾಗುತ್ತದೆ.
