ಬೆಂಗಳೂರು,ಮಾ.25- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟದ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ನಾಳೆ ಅಧಿಕೃತವಾಗಿ ಪ್ರಕಟಿಸಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಜೆಡಿಎಸ್ ಕೋರ್ಕಮಿಟಿ ಸಭೆ ನಾಳೆ ಮಧ್ಯಾಹ್ನ ನಡೆಯಲಿದ್ದು, ಆನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಮಂಡ್ಯ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದು ಇಂದು ಸಂಜೆ ವೇಳೆಗೆ ನಿರ್ಧಾರವಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ , ಕೋಲಾರ ಮೀಸಲು ಕ್ಷೇತ್ರದಿಂದ ಮಲ್ಲೇಶ್ ಬಾಬು ಅಭ್ಯರ್ಥಿಗಳಾಗಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ರ್ಪಧಿಸುವುದು ಬಹುತೇಕ ಖಚಿತವಾಗಿದೆ.
ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕ್ಷೇತ್ರ ಬಿಟ್ಟು ಹೋಗದಂತೆ ಕುಮಾರಸ್ವಾಮಿಯವರನ್ನು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜೆಪಿ ನಗರದ ಮನೆಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಅವರನ್ನು ನಿನ್ನೆ ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಭೇಟಿಯಾಗಿ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಕುಮಾರಸ್ವಾಮಿ ಮಾತನಾಡಿ, ಕಾರ್ಯಕರ್ತರ ಒತ್ತಾಸೆಗೆ ನಿರಾಸೆ ಮಾಡುವುದಿಲ್ಲ. ಆದರೆ ಚನ್ನಪಟ್ಟಣ ಕ್ಷೇತ್ರದ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಇಂದು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಎಚ್.ಸಿ.ಜಯಮುತ್ತು ನೇತೃತ್ವದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಬಿಟ್ಟು ಹೋಗಬಾರದು.
ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಾರದು ಎಂದು ಒತ್ತಾಯ ಮಾಡಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಈಗಾಗಲೇ ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಕಟಿಸಿದ್ದಾರೆ. ಮಂಡ್ಯದಲ್ಲಿ ನಡೆದ ಸಭೆಯಲ್ಲೂ ಕೂಡ ಕುಮಾರಸ್ವಾಮಿಯವರು ನಿಮಗೆ ನಿರಾಶೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅಭ್ಯರ್ಥಿ ಆಯ್ಕೆಯನ್ನು ಇಂದು ಪ್ರಕಟಿಸುವುದಾಗಿ ಘೋಷಿಸಿದ್ದರು.
ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಪಕ್ಷದ ಮುಖಂಡರು ಹಲವು ಬಾರಿ ಒತ್ತಾಯ ಮಾಡಿದ್ದರು. ಆದರೂ ಸ್ಪರ್ಧೆ ಮಾಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಪದೇಪದೇ ಪುನರುಚ್ಚರಿಸಿದ್ದರು. ಒಂದು ವೇಳೆ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ರ್ಪಸುವುದರಿಂದ ಹಿಂದೆ ಸರಿದರೆ ನಿಖಿಲ್ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಗಳಿವೆ.