Homeರಾಜ್ಯನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನ ಸುತ್ತಮುತ್ತ ಸರ್ಕಾರಿ ಭೂಮಿ ಕಬಳಿಕೆ

ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನ ಸುತ್ತಮುತ್ತ ಸರ್ಕಾರಿ ಭೂಮಿ ಕಬಳಿಕೆ

ಬೆಂಗಳೂರು,ಅ.1- ನಗರದ ಸುತ್ತಮುತ್ತ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸುವವರಿಗೆ ರಾಜ್ಯ ಸರ್ಕಾರ ಬೆಂಬಲವಾಗಿ ನಿಂತಿದೆ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್‌ ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಆರೋಪಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳನ್ನು ಪ್ರದರ್ಶಿಸಿದ ಅವರು, ಸರ್ಕಾರಿ ಭೂಮಿ ನಕಲಿ ದಾಖಲೆ ಮೂಲಕ ಕಬಳಿಸುವ ಬಗ್ಗೆ ಹಿಂದಿನ ಮುಖ್ಯಮಂತ್ರಿ, ಈಗಿನ ಮುಖ್ಯಮಂತ್ರಿ, ಕಂದಾಯ ಸಚಿವರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಿಗೇಹಳ್ಳಿ ಗ್ರಾಮದ 14 ಎಕರೆ ಭೂಮಿಯನ್ನು ಚಂದ್ರನ್‌, ಪ್ರಸಾದ್‌, ದಿವ್ಯ, ದೇವರಾಜ್‌ ಎಂಬುವವರ ಹೆಸರಿನಲ್ಲಿ ಸರ್ಕಾರಿ ಜಮೀನನ್ನು ಕಬಳಿಸಲಾಗಿದೆ. ಚಂದ್ರನ್‌ ಎಂಬುವವರು 1957 ರಲ್ಲಿ ಜನಿಸಿರುವುದು ಅವರ ಆಧಾರ್‌ ದಾಖಲೆಯಲ್ಲಿದೆ. ಆದರೆ ಅವರಿಗೆ 1954 ರಲ್ಲೇ ಸರ್ಕಾರಿ ಭೂಮಿ ಮಂಜೂರಾಗಿರುವ ದಾಖಲೆಯಿದೆ. ಅಂದರೆ ಹುಟ್ಟುವ ಮುನ್ನವೇ ಜಮೀನು ಮಂಜೂರಾಗಿರುವ ದಾಖಲೆಯಿದೆ. ಸುಮಾರು 500 ರಿಂದ 600 ಕೋಟಿ ರೂ. ಬೆಲೆ ಬಾಳುವ ಜಮೀನನ್ನು ಕಬಳಿಸಲಾಗಿದೆ ಎಂದು ಆರೋಪಿಸಿದರು.

ಬೆಂಗಳೂರು ಸುತ್ತಮುತ್ತ ಈ ರೀತಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆಯೇ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ತಾವರೆಕೆರೆ ಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ 26 ಎಕರೆ ಜಮೀನನ್ನು ನಕಲಿ ದಾಖಲೆ ಮೂಲಕ ಕಬಳಿಸಲಾಗಿದೆ. ಆ ಗ್ರಾಮಕ್ಕೆ ಸಂಬಂಧಿಸಿದವರ ಹೆಸರಿಗೆ ಜಮೀನು ಮಂಜೂರಾಗಿದ್ದು, ಜಮೀನು ಉಳುಮೆ ಮಾಡುವ ರೈತರಿಗೆ ಮಂಜೂರಾತಿ ಮಾಡಿಲ್ಲ ಎಂದು ಆರೋಪಿಸಿದರು.

ಇಂತಹ ವಿಚಾರಗಳನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಪ್ರಶ್ನಿಸಬಾರದೇ? ಎಂದ ಅವರು, ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಭೂಮಿ ಕಬಳಿಕೆ ಆಗುತ್ತಿದೆ ಎಂದು ಮಂಜುನಾಥ್‌ ಹೇಳಿದರು.ರಾಜಕಾರಣಿಗಳ ಬೆಂಬಲಿಗರಿಗೆ, ಬೇನಾಮಿದಾರರಿಗೆ ಈ ರೀತಿ ಜಮೀನು ಮಂಜೂರಾಗಿರುವ ನಿದರ್ಶನಗಳಿದ್ದು, ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಹೋರಾಟದಿಂದ ಹಿಂದಕ್ಕೆ :
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಉಪನಗರ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿತ್ತು ಎಂಬ ದಾಖಲೆಯನ್ನು ಪೌರಾಡಳಿತ ಸಚಿವ ಎಚ್‌.ಸಿ.ಬಾಲಕೃಷ್ಣ ಅವರು ಒದಗಿಸಿದರೆ ಹೋರಾಟದಿಂದ ಹಿಂದೆ ಸರಿಯಲಾಗುವುದು ಎಂದು ಅವರು ಹೇಳಿದರು.

ಕುಮಾರಸ್ವಾಮಿಯವರ ಅವಧಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಆರೋಪಿಸುತ್ತಾರೆ. ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಈ ಸರ್ಕಾರವೇ ಹಠಕ್ಕೆ ಬಿದ್ದು ಬಿಡದಿ ಉಪನಗರ ಯೋಜನೆಯನ್ನು ರೈತರ ವಿರೋಧದ ನಡುವೆ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಜಿಬಿಎ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ, ರಾಜ್ಯ ವಕ್ತಾರ ದೇವರಾಜ್‌, ಮುಖಂಡರಾದ ಪ್ರದೀಪ್‌, ಮಹೇಶ್‌ ಉಪಸ್ಥಿತರಿದ್ದರು.

RELATED ARTICLES
spot_img

Latest News