Homeರಾಜ್ಯವಿಧಾನಸೌಧದ ಮೆಟ್ಟಿಲುಗಳ ಮೇಲೆ 'ಉರ್ದು ಹಬ್ಬ' : ಕಾಂಗ್ರೆಸ್ ಸರ್ಕಾರಕ್ಕೆ ಕರವೇ ನಾರಾಯಣಗೌಡ ನೇರ ಎಚ್ಚರಿಕೆ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ : ಕಾಂಗ್ರೆಸ್ ಸರ್ಕಾರಕ್ಕೆ ಕರವೇ ನಾರಾಯಣಗೌಡ ನೇರ ಎಚ್ಚರಿಕೆ

ಬೆಂಗಳೂರು,ಅ.1-ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜನೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕನ್ನಡಿಗರ ವಲಯದಲ್ಲಿ ಹಾಗೂ ಭಾಷಾ ಪ್ರೇಮಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರದ ಈ ನಡೆಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ. ನಾರಾಯಣಗೌಡ ಅವರು, ಯಾವುದೇ ಕಾರಣಕ್ಕೂ ವಿಧಾನಸೌಧದ ಮುಂಭಾಗ ಉರ್ದು ಹಬ್ಬ ಆಯೋಜಿಸಲು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಟಿ. ನಾರಾಯಣಗೌಡ ಅವರು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಮಾಡಲು ಹೊರಟಿರುವುದು ಅತ್ಯಂತ ಅವಿವೇಕದ, ಅಪ್ರಬುದ್ಧ ಹಾಗೂ ದುರಹಂಕಾರದ ನಿರ್ಧಾರವಾಗಿದೆ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮದಿ ಮತ್ತು ಸೌಹಾರ್ದತೆಯನ್ನು ಹಾಳುಗೆಡಹಲು ಹೊರಟಂತೆ ಕಾಣುತ್ತಿದೆ. ಈ ತಲೆಹರಟೆ ನಿರ್ಧಾರವನ್ನು ಯಾರು ಕೇಳಿದ್ದರು? ಇದು ಕನ್ನಡಿಗರು ಮತ್ತು ಉರ್ದು ಭಾಷಿಕರ ನಡುವೆ ವೈಷಮ್ಯ ತಂದಿಡುವ ಹುನ್ನಾರ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಬೆಂಗಳೂರಿನಲ್ಲಿ ಉರ್ದು ಕಾರ್ಯಕ್ರಮಗಳನ್ನು ಮಾಡಲು ಸಾವಿರಾರು ಜಾಗಗಳಿವೆ. ಆದರೆ, ನಾಡಿನ ಶಕ್ತಿಸೌಧವಾದ ವಿಧಾನಸೌಧವೇ ಇದಕ್ಕೆ ಬೇಕಾಗಿಲ್ಲ. ಸರ್ಕಾರವೇ ದುಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮವನ್ನು ತೀವ್ರವಾಗಿ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮಾಧ್ಯಮಗಳಲ್ಲಿ ಉರ್ದು ವಾರ್ತೆ ಪ್ರಸಾರ ಮಾಡುವ ಕುರಿತು ಹಿಂದೆ ನಡೆದಿದ್ದ ಭಾಷಾ ಹಿತಾಸಕ್ತಿ ಗಲಾಟೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾದ ಘಟನೆಗಳನ್ನು ಉಲ್ಲೇಖಿಸಿರುವ ಕರವೇ ಅಧ್ಯಕ್ಷರು, ಹಿಂದೆ ಉರ್ದು ವಾರ್ತೆ ಸಂಬಂಧ ರಾಜ್ಯದಲ್ಲಿ ಸಂಭವಿಸಿದ ಕಹಿ ಘಟನೆಗಳು ಮತ್ತು ಗಲಭೆಗಳನ್ನು ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬಾರದು.

ಇಂದು ಉರ್ದು ಹಬ್ಬ ಮಾಡಿದರೆ, ನಾಳೆ ಹಿಂದಿ, ತಮಿಳು, ತೆಲುಗು, ಮರಾಠಿ ಹಬ್ಬಗಳನ್ನು ವಿಧಾನಸೌಧದ ಮುಂದೆ ಮಾಡಿ, ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಲು ಹೊರಡುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಿಎಂ, ಡಿಸಿಎಂಗೆ ನೇರ ಆಗ್ರಹ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಕ್ಷಣವೇ ಪ್ರವೇಶಿಸಿ ಈ ಱಉರ್ದು ಹಬ್ಬೞದ ನಿರ್ಧಾರವನ್ನು ಕೈಬಿಡಬೇಕು ಎಂದು ಕರವೇ ಆಗ್ರಹಿಸಿದೆ. ರಾಜ್ಯದಲ್ಲಿ ವಿವಾದಗಳನ್ನು ಸೃಷ್ಟಿಸಿ ಸೌಹಾರ್ದತೆಯನ್ನು ಹಾಳುಗೆಡಹಲು ಸಂಚು ರೂಪಿಸುತ್ತಿರುವವರನ್ನು ಸರ್ಕಾರ ತಕ್ಷಣವೇ ದೂರವಿಡಬೇಕು. ಇಲ್ಲವಾದಲ್ಲಿ ಕನ್ನಡಿಗರ ರಕ್ಷಣೆಗಾಗಿ ಉಗ್ರ ಹೋರಾಟ ರೂಪಿಸುವುದಾಗಿ ಕರವೇ ಸರ್ಕಾರಕ್ಕೆ ಸೂಚನೆ ನೀಡಿದೆ.

1994ರ ಉರ್ದು ವಾರ್ತೆ ವಿವಾದದ ಹಿನ್ನೆಲೆ
ಈಗಿನ ಬೆಳವಣಿಗೆಗೆ ಹಿಂದಿನ ಘಟನೆಯನ್ನು ಹೋಲಿಸಿ ಚರ್ಚೆ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ 1994ರ ಬೆಂಗಳೂರಿನ ಉರ್ದು ವಾರ್ತೆ ವಿವಾದ. ಅಂದು ಬೆಂಗಳೂರು ದೂರದರ್ಶನದಲ್ಲಿ ಕನ್ನಡ ಸುದ್ದಿಯ ನಂತರ 10 ನಿಮಿಷಗಳ ಉರ್ದು ಸುದ್ದಿ ಪ್ರಸಾರ ಆರಂಭವಾದ ವಿಚಾರಕ್ಕೆ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿದ್ದವು. ನಂತರ ಪ್ರತಿಭಟನೆಗಳು ಹಿಂಸಾತಕ ಸ್ವರೂಪ ಪಡೆದುಕೊಂಡು ಕೋಮು ಸಂಘರ್ಷಕ್ಕೆ ತಿರುಗಿದ್ದವು. ಆ ಘಟನೆಯಲ್ಲಿ ಸಾವು-ನೋವು ಮತ್ತು ಆಸ್ತಿ ಹಾನಿ ಸಂಭವಿಸಿತ್ತು.

ಲೋಕಸಭೆಯಲ್ಲಿ 1994ರ ಡಿಸೆಂಬರ್‌ನಲ್ಲಿ ನೀಡಿದ ಕೇಂದ್ರ ಸರ್ಕಾರದ ಉತ್ತರದಲ್ಲಿಯೂ ಆ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌‍ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು ಎಂಬ ಮಾಹಿತಿ ದಾಖಲಾಗಿದೆ. ಈ ಇತಿಹಾಸವನ್ನು ಉಲ್ಲೇಖಿಸಿರುವ ನಾರಾಯಣಗೌಡ, ಹಿಂದಿನ ಭಾಷಾ ವಿವಾದಗಳಿಂದ ಪಾಠ ಕಲಿಯಬೇಕಿದ್ದು, ಯಾವುದೇ ಕಾರಣಕ್ಕೂ ಹೊಸ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭಾಷೆಗಳ ನಡುವೆ ಸಂಘರ್ಷ ಬೇಡ
ನಾರಾಯಣಗೌಡ ಅವರ ಹೇಳಿಕೆಯ ಮುಖ್ಯ ಅಂಶವೆಂದರೆ, ಉರ್ದು ಭಾಷೆಯ ವಿರುದ್ಧ ತಮ ಸಂಘಟನೆ ಇಲ್ಲ; ಆದರೆ ಸರ್ಕಾರದ ನಿರ್ಧಾರದಿಂದ ಕನ್ನಡಿಗರು ಮತ್ತು ಉರ್ದು ಭಾಷಿಕರ ನಡುವೆ ಅನಗತ್ಯ ಭಿನ್ನಾಭಿಪ್ರಾಯ ಮೂಡಬಾರದು ಎಂಬುದು. ಮುಂದೆ ಹಿಂದಿ, ತಮಿಳು, ತೆಲುಗು, ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಕಾರ್ಯಕ್ರಮಗಳಿಗೂ ಇದೇ ರೀತಿಯ ಸರ್ಕಾರಿ ವೇದಿಕೆ ನೀಡುವ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿರುವ ಅವರು, ಸರ್ಕಾರ ವಿವಾದಾತಕ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES
spot_img

Latest News