Homeರಾಜ್ಯಕೆಪಿಎಸ್‌‍ಸಿಯನ್ನು ಮುಚ್ಚುವುದೇ ಒಳ್ಳೆಯದು : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಕೆಪಿಎಸ್‌‍ಸಿಯನ್ನು ಮುಚ್ಚುವುದೇ ಒಳ್ಳೆಯದು : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಅ.1- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದ ವಿವಿಧ ನೆಮಕಾತಿಗಳಲ್ಲಿನ ಅಕ್ರಮಗಳನ್ನು ಸಿಐಡಿ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದರೂ, ಅದನ್ನು ಕಸಿದುಕೊಂಡಿದ್ದು ಏಕೆ? ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಪ್ರಚಾರಕ್ಕಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈಗ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ಕೈಗೆತ್ತಿಕೊಂಡಿವೆ. ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ ಮಾಹಿತಿಗಳನ್ನು ಹೊರತುಪಡಿಸಿ, ಕೇಂದ್ರದ ತನಿಖಾ ಸಂಸ್ಥೆಗಳು ಹೊಸದಾಗಿ ಯಾವ ವಿಚಾರಗಳನ್ನು ಪತ್ತೆ ಹಚ್ಚಿವೆ ಎಂದು ಬಹಿರಂಗ ಪಡಿಸಬೇಕೆಂದು ಸವಾಲು ಹಾಕಿದರು.

ಸಕಾರಣ ಇಲ್ಲದೆ ಸಿಐಡಿಯಿಂದ ತನಿಖೆಯನ್ನು ಕಸಿದುಕೊಳ್ಳಲಾಯಿತು. ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಎಸ್‌‍ಎಲ್‌ಪಿ ಸಲ್ಲಿಸಿದೆ. ಇಂದು ಅದರ ವಿಚಾರಣೆ ನಡೆಯಲಿದೆ ಎಂದು ಹೇಳಿದರು.ಅಭ್ಯರ್ಥಿಗಳು ಸರ್ಕಾರಿ ನೌಕರಿಗಾಗಿ ಊರಿಂದ ಊರಿಗೆ ಬಂದು ಹಲವಾರು ಅವ್ಯವಸ್ಥೆಗಳನ್ನು ಸಹಿಸಿಕೊಂಡು, ಹಣಕಾಸಿನ ಖರ್ಚಿನ ನಡುವೆ, ಇಡೀ ಕುಟುಂಬದ ಪರದಾಟದ ಜೊತೆಗೆ ಉದ್ಯೋಗಕ್ಕಾಗಿ ಶ್ರಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಹುದ್ದೆಗಳನ್ನು ಮಾರಿಕೊಳ್ಳುವವರು ಮನುಷ್ಯರೇ ಅಲ್ಲ. ಈ ಪರಿಸ್ಥಿತಿಯನ್ನು ನೋಡಿದರೆ, ಕೆಪಿಎಸ್‌‍ಸಿಯನ್ನು ಸಾಂವಿಧಾನಿಕವಾಗಿ ಮುಚ್ಚುವುದೇ ಒಳ್ಳೆಯದು ಎಂದರು.

ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೆ. 11 ಸಾವಿರ ಪೊಲೀಸ್‌‍ ಕಾನ್ಸ್ ಟೇಬಲ್‌ಗಳ ಹುದ್ದೆಗಳನ್ನು ಯಾವುದೇ ಲೋಪಗಳಿಲ್ಲದೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಕಳಪೆ ಹೆಲೆಟ್‌ಗಳ ಬಳಕೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆಗೆ ಹಲವಾರು ವಿಚಾರಗಳು ಚರ್ಚೆಯಾಗಿವೆ. ಸಾರಿಗೆ ಸಚಿವ ಬೈರತಿ ಸುರೇಶ್‌ ಮತ್ತು ತಾವು ಸಭೆ ನಡೆಸಿದ್ದು, ನಾಗರಿಕರ ಒಳಿತಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.

ಹಾಲಿನ ದರ ಹೆಚ್ಚಳಕ್ಕೆ ರೈತರಿಂದ ಬೇಡಿಕೆ ಬಂದಿದೆ. ರೈತರಿಗೆ ಒಳ್ಳೆಯದಾದರೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದರ ನಂತರವೂ ಬೇರೆ ರಾಜ್ಯಗಳಿಗಿಂತಲೂ ನಮಲ್ಲಿ ಹಾಲಿನ ಮಾರಾಟ ದರ ಕಡಿಮೆ ಇರಲಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಸೇರಿದಂತೆ ಯಾವುದೇ ಹೆಚ್ಚಳ ಮಾಡಿದರೂ ಅದನ್ನು ದೇಶ ಸೇವೆಗೆ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿದರೆ ವಿರೋಧಗಳು ವ್ಯಕ್ತವಾಗುತ್ತಿವೆ ಎಂದರು.

ಉರ್ದು ಹಬ್ಬ ಆಚರಣೆಗೆ ಸಚಿವ ಯು.ಟಿ.ಖಾದರ್‌ ನೀಡಿರುವ ಪ್ರಸ್ತಾವನೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ದೇಶೀಯವಾಗಿ ಬಳಕೆಯಲ್ಲಿರುವ ತೆಲುಗು, ತಮಿಳು, ಉರ್ದು, ಒಡಿಯಾ ಸೇರಿದಂತೆ ಯಾವುದೇ ಭಾಷಾ ವಿಚಾರವನ್ನು ಸಂಭ್ರಮಿಸುವುದರಲ್ಲಿ ತಪ್ಪಿಲ್ಲ. ಆಂಧ್ರಪ್ರದೇಶದಲ್ಲಿ ಉರ್ದು ಎರಡನೇ ಅಧಿಕೃತ ಭಾಷೆಯಾಗಿದೆ. ಆಲ್ಲಿ ಬಿಜೆಪಿ ಮೈತ್ರಿ ಕೂಟವೇ ಅಧಿಕಾರದಲ್ಲಿಲ್ಲವೇ? ಎಂದು ಪ್ರಶ್ನಿಸಿದರು.ಇಂತಹ ವಿಚಾರಗಳ ಬದಲಾಗಿ ನಿರುದ್ಯೋಗ, ಬೆಲೆ ಏರಿಕೆ, ತಲಾ ಆದಾಯ, ವಿದೇಶಾಂಗ ನೀತಿ, ಆಹಾರ ಮತ್ತು ತೈಲಗಳ ಕೊರತೆಯಂತಹ ಜನರ ವಿಚಾರಗಳ ಬಗ್ಗೆ ಬಿಜೆಪಿಯವರು ಚರ್ಚೆ ಮಾಡಲಿ ಎಂದು ಸಲಹೆ ನೀಡಿದರು.

ಗುತ್ತಿಗೆದಾರರು ಪದೇ ಪದೇ ಬಾಕಿ ಬಿಲ್‌ಗಳ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಖಾಸಗಿ ವ್ಯಕ್ತಿಗಳು ನೀಡಿದ ಪತ್ರಕ್ಕನುಗುಣವಾಗಿ ಗುತ್ತಿಗೆಗಳನ್ನು ನೀಡಲಾಗುತ್ತಿತ್ತು. ನಮ ಸರ್ಕಾರ ಅಂತಹ ವ್ಯವಸ್ಥೆಗಳನ್ನು ಸರಿಪಡಿಸಿ ಕಾಮಗಾರಿಗಳ ಅಗತ್ಯತೆ ಅನುಸಾರ ಶಾಸಕರ ಶಿಫಾರಸು ಆಧರಿಸಿ ಕಾಮಗಾರಿಗಳನ್ನು ಗುತ್ತಿಗೆ ನೀಡುತ್ತಿದೆ. ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಿಂದಿನ ಬಾಕಿಯನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ. ಇದಕ್ಕಾಗಿ ಗುತ್ತಿಗೆದಾರರ ಸಂಘದವರೇ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶಂಸಿಸಿದ್ದಾರೆ ಎಂದು ಹೇಳಿದರು. ಮಾದಕ ವ್ಯಸನಗಳ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ತನಿಖೆ ಹಾಗೂ ಕಾರ್ಯಾಚರಣೆ ಅಧಿಕಾರಿಗಳ ದಳವನ್ನು ಸಶಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

RELATED ARTICLES
spot_img

Latest News