ನವದೆಹಲಿ,ಅ.1-ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ತಪ್ಪಿಸಿಕೊಳ್ಳುವ ವಾಹನ ಸವಾರರು ಹಾಗೂ ಮಾಲೀಕರಿಗೆ ಸುಪ್ರೀಂಕೋರ್ಟ್ ಭಾರೀ ಆಘಾತ ನೀಡಿದೆ.ಇ-ಚಲನ್ ದಂಡ ಬಾಕಿ ಇರುವ ವಾಹನಗಳ ಆರ್‌ಸಿ (ನೋಂದಣಿ ಪ್ರಮಾಣಪತ್ರ) ನವೀಕರಣ, ಮಾಲೀಕತ್ವ ವರ್ಗಾವಣೆ, ಚಾಲನಾ ಪರವಾನಗಿ (ಡಿಎಲ್) ನವೀಕರಣ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ನಿರ್ದೇಶನ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ದಂಡ ವಸೂಲಿ ಮಾಡಲು ಸಾಧ್ಯವಾಗದಿದ್ದ ಮೇಲೆ ಲಕ್ಷಾಂತರ ಇ-ಚಲನ್‌ಗಳನ್ನು ನೀಡುವುದರಲ್ಲಿ ಅರ್ಥವಿಲ್ಲ, ಎಂದು ಖಡಾಖಂಡಿತವಾಗಿ ಹೇಳಿದೆ.
ಬಾಕಿ ಇರುವ ಇ-ಚಲನ್ ಹೊಂದಿರುವ ವಾಹನಗಳನ್ನು ತಕ್ಷಣವೇ ಪರಿವಾಹನ್ ಪೋರ್ಟಲ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಬೇಕು. ಇದರಿಂದ ವಾಹನಗಳ ಮಾರಾಟ ಅಥವಾ ವರ್ಗಾವಣೆ ಸಂಪೂರ್ಣ ಬಂದ್ ಆಗಲಿದೆ.ದಂಡ ಪಾವತಿಯಾಗುವವರೆಗೆ ಯಾವುದೇ ತಪಾಸಣಾ ಕೇಂದ್ರಗಳು ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡಬಾರದು.
ಆರ್‌ಸಿ, ಫಿಟ್ನೆಸ್ ಸರ್ಟಿಫಿಕೇಟ್, ವಿಳಾಸ ಬದಲಾವಣೆ ಮತ್ತು ನಕಲಿ ಆರ್‌ಸಿ ವಿನಂತಿಗಳನ್ನು ಅಧಿಕಾರಿಗಳು ನಿರಾಕರಿಸಬೇಕು.ಪದೇ ಪದೇ ನಿಯಮ ಉಲ್ಲಂಘಿಸುವ ಚಾಲಕರ ಡಿಎಲ್ ನವೀಕರಣ ತಡೆಯುವುದರ ಜೊತೆಗೆ, ಚಾಲ್ತಿಯಲ್ಲಿರುವ ಪರವಾನಗಿಯನ್ನೇ ಅಮಾನತುಗೊಳಿಸಲು ಕ್ರಮಕೈಗೊಳ್ಳಬೇಕು. (ವರ್ಷದಲ್ಲಿ 5ಕ್ಕೂ ಹೆಚ್ಚು ಉಲ್ಲಂಘನೆ ಎಸಗಿದರೆ ಅದನ್ನು ಸಾರ್ವಜನಿಕರಿಗೆ ಅಪಾಯಕಾರಿ ಕೃತ್ಯ ಎಂದು ಪರಿಗಣಿಸಲಾಗುತ್ತದೆ).
ಕೇವಲ ಚಲನ್ ನೀಡುವುದಷ್ಟೇ ಅಲ್ಲದೆ, ರಸ್ತೆಗಳಲ್ಲಿ ಕಡ್ಡಾಯ ತಪಾಸಣೆ ನಡೆಸಿ, ಬಾಕಿ ದಂಡ ಕಟ್ಟದ ವಾಹನಗಳನ್ನು ಜಪ್ತಿ ಮಾಡಲು ಆದೇಶಿಸಲಾಗಿದೆ.ಇಡೀ ದೇಶದಲ್ಲಿ ನೀಡಲಾದ ಇ-ಚಲನ್‌ಗಳಲ್ಲಿ ಸುಮಾರು 49,194.05 ಕೋಟಿ ರೂ. ದಂಡ ಮೊತ್ತ ಬಾಕಿ ಉಳಿದಿದ್ದು, ಅದರಲ್ಲಿ ಕೇವಲ 26,175.05 ಕೋಟಿ ಮಾತ್ರ ವಸೂಲಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಬರಿ ಕಾಗದದ ಮೇಲಿನ ಕಾನೂನು ಬಿಟ್ಟು ನೆಲಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಇ-ಚಲನ್ ವ್ಯವಸ್ಥೆಯ ಉದ್ದೇಶ ಕೇವಲ ಡಿಜಿಟಲ್ ದಂಡ ರಚಿಸುವುದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಾಹನಗಳ ಯಾದೃಚ್ಛಿಕ ತಪಾಸಣೆ ನಡೆಸಬೇಕು. ಬಾಕಿ ಇ-ಚಲನ್ ಹೊಂದಿರುವ ವಾಹನ ಪತ್ತೆಯಾದರೆ, ಕಾನೂನಿನ ಪ್ರಕಾರ ವಾಹನವನ್ನು ವಶಕ್ಕೆ ಪಡೆಯುವಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
ಇದಲ್ಲದೆ, ಸರಕು ವಾಹನಗಳ ಓವರ್‌ಲೋಡಿಂಗ್ ತಡೆಯಲು ತೂಕ-ಇನ್-ಚಲನೆ ವ್ಯವಸ್ಥೆ ಹಾಗೂ ಪಾದಚಾರಿಗಳ ಸುರಕ್ಷತಾ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿವೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 136ಂ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 167ಂ ಅಡಿಯಲ್ಲಿ ವೇಗದ ಕ್ಯಾಮೆರಾಗಳು, ಸಿಸಿಟಿವಿ ಕ್ಯಾಮೆರಾಗಳು, ಸ್ಪೀಡ್ ಗನ್‌ಗಳು ಸೇರಿದಂತೆ ತಂತ್ರಜ್ಞಾನ ಆಧಾರಿತ ಜಾರಿ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ನ್ಯಾಯಾಲಯ ಈಗಾಗಲೇ ಒತ್ತಾಯಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸಬೇಕು. ಜಾರಿ ಸಾಧನಗಳ ಖರೀದಿ, ನಿಯೋಜನೆ ಮತ್ತು ಮಾಪನಾಂಕ ನಿರ್ಣಯ ಸೇರಿದಂತೆ ಇ-ಜಾರಿ ವ್ಯವಸ್ಥೆಯ ಅನುಷ್ಠಾನವನ್ನು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಲಾಗಿದೆ.
ರಸ್ತೆ ಸುರಕ್ಷತೆ ವಿಚಾರದಲ್ಲಿ ಓವರ್‌ಲೋಡ್ ಸಾರಿಗೆ ವಾಹನಗಳ ವಿರುದ್ಧವೂ ನ್ಯಾಯಾಲಯ ಗಮನ ಹರಿಸಿದೆ. ಹೆಚ್ಚುವರಿ ಸರಕು ಇಳಿಸುವವರೆಗೆ ಅಂತಹ ವಾಹನಗಳು ತಪಾಸಣಾ ಸ್ಥಳವನ್ನು ದಾಟಿ ಮುಂದೆ ಸಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಓವರ್‌ಲೋಡ್‌ನಿಂದ ಬ್ರೇಕಿಂಗ್ ದೂರ ಹೆಚ್ಚಾಗುವುದು, ಬ್ರೇಕ್ ವೈಫಲ್ಯ, ಟೈರ್ ಸ್ಫೋಟ, ವಾಹನ ಪಲ್ಟಿಯಾಗುವ ಅಪಾಯ ಮತ್ತು ಸ್ಟೀರಿಂಗ್ ನಿಯಂತ್ರಣ ಕಡಿಮೆಯಾಗುವಂತಹ ಅಪಾಯಗಳಿರುವುದರಿಂದ ತೂಕ-ಅಳತೆ ವ್ಯವಸ್ಥೆಗಳನ್ನು ಎಲೆಕ್ಟ್ರಾನಿಕ್ ಜಾರಿ ಮತ್ತು ಟೋಲ್ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಕುರಿತು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಗಿದೆ.
