Homeರಾಷ್ಟ್ರೀಯಪ್ರಾಣ ಪಣಕ್ಕಿಟ್ಟು ಹೋರಾಡಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ 'ಹೀರೋ'ಗೆ ವಿಶ್ವವೇ ಜೈಕಾರ

ಪ್ರಾಣ ಪಣಕ್ಕಿಟ್ಟು ಹೋರಾಡಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ‘ಹೀರೋ’ಗೆ ವಿಶ್ವವೇ ಜೈಕಾರ

ದುಬೈ/ತೆಲ್‌ಅವೀವ್‌, ಅ.1- ಕಾಕ್‌ಪಿಟ್‌ನಲ್ಲೇ ಸಹಪೈಲಟ್‌ನಿಂದ ಚಾಕು ಇರಿತಕ್ಕೊಳಗಾದರೂ ಧೈರ್ಯ ಕಳೆದುಕೊಳ್ಳದ ಭಾರತೀಯ ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್‌, ಕೊನೆಯ ಕ್ಷಣದಲ್ಲೂ ಕಾಕ್‌ಪಿಟ್‌ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳನುಗ್ಗಿ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಸಾಹಸದಿಂದ 174 ಮಂದಿಯ ಜೀವ ಉಳಿದಿದ್ದು, ಈ ಘಟನೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾಪ್ಟನ್‌ ಮಚ್ಚಾರ್‌ ಅವರ ಸಾಹಸಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ನಾಯಕರ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್‌ ಮಚ್ಚಾರ್‌ ಅವರನ್ನು ಹೀರೋ ಎಂದು ಕರೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದರೂ ಇತರರ ಜೀವ ರಕ್ಷಿಸಲು ಅವರು ತೋರಿದ ಧೈರ್ಯ ಮತ್ತು ಅಚಲ ನಿರ್ಧಾರದಿಂದ ದೊಡ್ಡ ದುರಂತ ತಪ್ಪಿದೆ ಎಂದು ಹೇಳಿದ್ದಾರೆ. ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದೂ ಮೋದಿ ತಿಳಿಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮಚ್ಚಾರ್‌ ಅವರ ಅಸಾಧಾರಣ ಧೈರ್ಯವನ್ನು ಶ್ಲಾಘಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿಯೂ ಪ್ರತಿರೋಧ ತೋರಿಸಿ ಕಾಕ್‌ಪಿಟ್‌ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಅವರು ಅವಕಾಶ ಮಾಡಿಕೊಟ್ಟರು. 174 ಮಂದಿಯ ಜೀವ ಉಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಘಟನೆಯ ಕುರಿತು ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿರುವುದಾಗಿ ತಿಳಿಸಿ, ಕ್ಯಾಪ್ಟನ್‌ ಹಾಗೂ ದಾಳಿಕೋರನನ್ನು ನಿಯಂತ್ರಿಸಲು ನೆರವಾದ ಪ್ರಯಾಣಿಕರ ಸಾಹಸವನ್ನು ಶ್ಲಾಘಿಸಿದ್ದಾರೆ.

ಪ್ರಸ್ತುತ ಗಾಯಗೊಂಡಿರುವ ಕ್ಯಾಪ್ಟನ್‌ ಸ್ಮಿತ್ ಅವರು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು?

ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ನಡೆದ ಅಪರೂಪದ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದನ್ನು ಭಾರತೀಯ ಮೂಲದ ಪೈಲಟ್‌ ತಮ್ಮ ಧೈರ್ಯ ಮತ್ತು ಸಾಹಸದಿಂದ ತಡೆದಿದ್ದಾರೆ.

ದುಬೈನಿಂದ ತೆಲ್‌ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹಪೈಲಟ್‌ ವಿಮಾನವನ್ನು ಪತನಗೊಳಿಸಲು ನಡೆಸಿದ ದಾಳಿ ಯತ್ನವನ್ನು ಮುಖ್ಯ ಪೈಲಟ್‌ ಕ್ಯಾಪ್ಟನ್‌ ಸಿತ್‌ ಮಚ್ಚಾರ್‌ ತಮ್ಮ ಜೀವಕ್ಕೆ ಅಪಾಯವಿದ್ದರೂ ಮೆಟ್ಟಿ ನಿಂತು, 174ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ರಕ್ಷಿಸಿದ್ದಾರೆ.

ವಿಮಾನವು ಗಗನದಲ್ಲಿ ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಒಮಾನ್‌ ಮೂಲದ ಸಹಪೈಲಟ್‌ ಏಕಾಏಕಿ ವಿಮಾನವನ್ನು ಪತನಗೊಳಿಸುವ ದುರುದ್ದೇಶದಿಂದ ಕಠಾರಿಯಿಂದ ಮುಖ್ಯ ಪೈಲಟ್‌ ಕ್ಯಾಪ್ಟನ್‌ ಸಿತ್‌ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳ ಹೊರತಾಗಿಯೂ ಧೈರ್ಯಗೆಡದ ಕ್ಯಾಪ್ಟನ್‌ ಸ್ಮಿತ್, ಕಾಕ್‌ಪಿಟ್‌ನಲ್ಲೇ ಸಹಪೈಲಟ್‌ ವಿರುದ್ಧ ಹೋರಾಡಿದ್ದಾರೆ.

ಅಲ್ಲದೆ, ತಕ್ಷಣವೇ ಕಾಕ್‌ಪಿಟ್‌ ಬಾಗಿಲು ತೆರೆದು ತುರ್ತು ಸಂದೇಶ ರವಾನಿಸಿದ್ದಾರೆ. ವಿಮಾನವು ಕೆಲವೇ ಸೆಕೆಂಡುಗಳಲ್ಲಿ ಸಾವಿರಾರು ಅಡಿ ಕೆಳಕ್ಕೆ ಇಳಿಯುತ್ತಿದ್ದಾಗ, ಸಿಬ್ಬಂದಿ ಹಾಗೂ ಇಸ್ರೇಲಿ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದ್ದಾರೆ. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

RELATED ARTICLES
spot_img

Latest News