Homeರಾಜ್ಯನಿಯಮ ಬಾಹಿರವಾಗಿ ಎಸ್‌‍ಐಆರ್‌ ಫಾರಂ-7 ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್‌ ಕೇಸ್‌‍

ನಿಯಮ ಬಾಹಿರವಾಗಿ ಎಸ್‌‍ಐಆರ್‌ ಫಾರಂ-7 ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್‌ ಕೇಸ್‌‍

ಬೆಂಗಳೂರು, ಅ.1- ಎಸ್‌‍ಐಆರ್‌ ವಿಚಾರವಾಗಿ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದು, ನಿಯಮ ಬಾಹಿರವಾಗಿ ಫಾರಂ-7 ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಎಸ್‌‍ಐಟಿ ತನಿಖೆ ನಡೆಸಲು ಮುಂದಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕಮಾರ್‌ ಅವರು ವಿಡಿಯೋ ಮೂಲಕ ನೀಡಿರುವ ಸಂದೇಶದಲ್ಲಿ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡುವ ದೊಡ್ಡ ಹುನ್ನಾರ ನಡೆದಿದೆ. 50 ಲಕ್ಷ ಜನರಿಗೆ ನೋಟೀಸ್‌‍ ನೀಡಲಾಗಿದೆ. ಇದರ ಹಿಂದೆ ಬಿಜೆಪಿ ನಾಯಕರ ಗ್ಯಾಂಗ್‌ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿ ರಾಜ್ಯದ ಎಲ್ಲರ ಮತದಾನದ ಹಕ್ಕು ರಕ್ಷಣೆ ನನ್ನ ಕರ್ತವ್ಯ. ಆದರೆ ಅದನ್ನು ನಿರ್ವಹಿಸುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಒಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕರು, ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕೈ ಬಿಡಲು ಸಂಚು ನಡೆಸಿದ್ದಾರೆ.

ನಿಯಮ ಬಾಹಿರವಾಗಿ ಫಾರಂ-7 ಅನ್ನು ಬಿಎಲ್‌ಒಗಳು, ಬಿಎಲ್‌ಎ-1 ಮತ್ತು ಬಿಎಲ್‌ಎ-2 ಅವರಿಗೆೆ ಸಲ್ಲಿಸಿ ಮತಗಳನ್ನು ತೆಗೆಸಿಹಾಕಲು ಪ್ರಯತ್ನಿಸಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿ ಸಮಗ್ರ ತನಿಖೆಯಾಗಬೇಕು. ಕ್ರಿಮಿನಲ್‌ ವಿಚಾರಣೆಯಾಗಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲಾ ಬಿಎಲ್‌ಒಗಳು ಮತ್ತು ಬಿಎಲ್‌ಎಗಳು ತಮ ಗೃಹ ಕಚೇರಿ ಕೃಷ್ಣಾಗೆ ಫಾರಂ.ನಂ-7 ಸಲ್ಲಿಸಿರುವವರ ಸಮಗ್ರ ಮಾಹಿತಿ ನೀಡುವಂತೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌‍ ಮುಖ್ಯಾಧಿಕಾರಿಗಳು, ಚುನಾವಣಾ ಆಯೋಗ ಮತ್ತು ಬಿಎಲ್‌ಒಗಳು, ಈ ನಿಟ್ಟಿನಲ್ಲಿ ಗಮನಹರಿಸಬೇಕು. ಎಸ್‌‍ಐಆರ್‌ ಪ್ರಕರಣದಿಂದ ಇಡೀ ರಾಜ್ಯವೇ ತಲ್ಲಣಗೊಂಡಿದೆ ಎಂದು ಹೇಳಿದ್ದಾರೆ.

ಜನರ ಮತದಾನದ ಹಕ್ಕನ್ನು ರಕ್ಷಿಸುವುದು ನಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ನೀಡುವ ಜೊತೆಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿಗಳು ಗೆಲುವು ಕಂಡಿರುವ ಕ್ಷೇತ್ರಗಳಲ್ಲೇ ಫಾರಂ.ನಂ.-7 ಅನ್ನು ದುರುಪಯೋಗಪಡಿಸಿಕೊಂಡಿರುವ ವಿಚಾರಗಳು ಬೆಳಕಿಗೆ ಬಂದಿವೆ.
ಸಚಿವ ಈಶ್ವರ್‌ ಖಂಡ್ರೆ ಅವರ ಕ್ಷೇತ್ರ ಭಾಲ್ಕಿ, ನಯನಾ ಮೋಟಮ ಅವರ ಕ್ಷೇತ್ರ ಮೂಡಿಗೆರೆ, ಆಸಿಫ್‌ ರಾಜು ಸೇಠ್‌ ಆಯ್ಕೆಯಾಗಿರುವ ಬೆಳಗಾವಿ ಉತ್ತರ, ತನ್ವೀರ್‌ ಸೇಠ್‌ ಅವರ ನರಸಿಂಹರಾಜ ಕ್ಷೇತ್ರ ಸೇರಿದಂತೆ ಹಲವು ಕಡೆಗಳಲ್ಲಿ ಅರ್ಜಿ ನಮೂನೆ-7ಅನ್ನು ನಿಯಮಬಾಹಿರವಾಗಿ ನೀಡಿರುವುದು ಕಂಡು ಬಂದಿದೆ.

ನೇರವಾಗಿ ಚುನಾವಣೆಯನ್ನು ಗೆಲ್ಲಲಾಗುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿಯ ರಾಷ್ಟ್ರೀಯ ಮತ್ತು ಸ್ಥಳೀಯ ನಾಯಕರು ಈ ರೀತಿ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿನ ಲೋಪಗಳನ್ನು ತನಿಖೆಗೊಳಪಡಿಸುವುದಾಗಿ ಹೇಳಿದ್ದಾರೆ. ಸರ್ಕಾರ ಎಸ್‌‍ಐಆರ್‌ ಅಕ್ರಮಗಳ ತನಿಖೆಗೆ ಎಸ್‌‍ಐಟಿ ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

RELATED ARTICLES
spot_img

Latest News