Homeರಾಜಕೀಯಮತದಾರರ ಹೆಸರು ಅಳಿಸುವ ಆರೋಪ 'ಟೂಲ್‌ಕಿಟ್‌‍ ರಾಜಕಾರಣ' : ಸಿ.ಟಿ.ರವಿ

ಮತದಾರರ ಹೆಸರು ಅಳಿಸುವ ಆರೋಪ ‘ಟೂಲ್‌ಕಿಟ್‌‍ ರಾಜಕಾರಣ’ : ಸಿ.ಟಿ.ರವಿ

ನವದೆಹಲಿ, ಅ.2- ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಬಿಜೆಪಿ ನಾಯಕರು ಸಂಚು ರೂಪಿಸಿ ಮತದಾರರ ಪಟ್ಟಿಯಿಂದ ಅಳಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಆರೋಪವನ್ನು ವಿಧಾನ ಪರಿಷತ್‌ ಸದಸ್ಯ ಡಾ. ರವಿ ಸಿ.ಟಿ. ಟೀಕಿಸಿದ್ದು, ಇದು ಉದ್ದೇಶಪೂರ್ವಕವಾಗಿ ಅಪನಂಬಿಕೆ ಮೂಡಿಸುವ ರಾಜಕೀಯದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ವರದಿಗಳಲ್ಲಿಯೂ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗಂಭೀರ ಆರೋಪಗಳಿಗೆ ದಾಖಲೆ ಹಾಗೂ ಸಾಕ್ಷ್ಯ ನೀಡಬೇಕು ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತಾಗಲೆಲ್ಲ ಕಾಂಗ್ರೆಸ್‌‍ ಪಕ್ಷ ಇವಿಎಂ ಹಾಗೂ ಚುನಾವಣಾ ಆಯೋಗವನ್ನು ಪ್ರಶ್ನಿಸುವ ಬದಲು ಸೋಲಿನ ಕಾರಣಗಳನ್ನು ಆತಾವಲೋಕನ ಮಾಡಿಕೊಳ್ಳಬೇಕು ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ 44 ಸ್ಥಾನ ಹಾಗೂ 2019ರಲ್ಲಿ 52 ಸ್ಥಾನ ಗೆದ್ದಿತ್ತು ಎಂದು ಉಲ್ಲೇಖಿಸಿದ ಅವರು, ಚುನಾವಣಾ ಪ್ರಕ್ರಿಯೆ ಕುರಿತು ಅನುಮಾನಗಳಿದ್ದರೆ ಅವುಗಳನ್ನು ದಾಖಲೆಗಳೊಂದಿಗೆ ಮಂಡಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ಅಳಿಸುವ ಪ್ರಕ್ರಿಯೆ ಬಿಜೆಪಿ ಕಾರ್ಯಕರ್ತರ ಕೈಯಲ್ಲಿಲ್ಲ. ಬೂತ್‌ಲೆವೆಲ್‌‍ ಅಧಿಕಾರಿಗಳು, ರಿಟರ್ನಿಂಗ್‌ ಅಧಿಕಾರಿಗಳು ಹಾಗೂ ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಯಾವುದೇ ದೂರು ಬಂದರೂ ಅದರ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಚುನಾವಣಾ ಅಧಿಕಾರಿಗಳದ್ದಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ಧಾರಗಳ ಬಗ್ಗೆ ಆಕ್ಷೇಪವಿದ್ದರೆ ಸಂವಿಧಾನಬದ್ಧ ಕಾನೂನು ಮಾರ್ಗಗಳ ಮೂಲಕ ಪ್ರಶ್ನಿಸಬಹುದು. ಆದರೆ ಸಾಕ್ಷ್ಯಾಧಾರಗಳಿಲ್ಲದೆ ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವುದರಿಂದಲೇ ಆರೋಪ ಸಾಬೀತಾಗಿದೆ ಎಂದು ಅರ್ಥವಲ್ಲ, ಅಂತಿಮ ತೀರ್ಪಿನವರೆಗೆ ಕಾಯಬೇಕು ಎಂದರು.

ನೈಸ್‌‍ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕ ತನಿಖೆ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು. ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಜಂಟಿ ಸದನ ಸಮಿತಿಯ ವರದಿಯನ್ನು ಬಹಿರಂಗಪಡಿಸಿ, ಅದರ ಆಧಾರದ ಮೇಲೆ ಚರ್ಚೆ ನಡೆಸಬೇಕು. ಯೋಜನೆಯ ರೂಪುರೇಷೆಗಳಲ್ಲಿ ಆಗಿರುವ ಬದಲಾವಣೆಗಳು ಹಾಗೂ ರೈತರ ಭೂಮಿಗೆ ಸಂಬಂಧಿಸಿದ ವಿಚಾರಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

RELATED ARTICLES
spot_img

Latest News