Homeಬೆಂಗಳೂರುಬೆಂಗಳೂರಲ್ಲಿ ಮಳೆ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದ ಹಲವು ಕಾಮಗಾರಿಗಳು

ಬೆಂಗಳೂರಲ್ಲಿ ಮಳೆ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದ ಹಲವು ಕಾಮಗಾರಿಗಳು

ಬೆಂಗಳೂರು, ಅ.2- ಮಳೆ ಅನಾಹುತ ಪ್ರದೇಶಗಳಿಗೆ ಶಾಶ್ವತ ಹಾಗೂ ಪರ್ಯಾಯ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಂಡಿರುವ ಪರಿಣಾಮ ಭಾರಿ ಮಳೆಯಾದರು ಹಲವು ಪ್ರಮುಖ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿಲ್ಲ.

ಮಾನ್ಯತಾ ಟೆಕ್‌ಪಾರ್ಕ್‌ ಬಳಿ ಸಮಸ್ಯೆಗೆ ಬ್ರೇಕ್‌; ಮಾನ್ಯತಾ ಟೆಕ್‌ಪಾರ್ಕ್‌, ವೀರಣ್ಣಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಬ್ಬಾಳ ಹೊರವರ್ತುಲ ರಸ್ತೆ ಮತ್ತು ವೀರಣ್ಣಪಾಳ್ಯ ಸರ್ವೀಸ್‌‍ ರಸ್ತೆಯ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ 10ರಿಂದ 15 ವರ್ಷಗಳಿಂದ ಮಳೆ ಸಂದರ್ಭದಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.ಕಾಲುವೆ ಪ್ರದೇಶದಲ್ಲಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಿ, ವೀರಣ್ಣಪಾಳ್ಯ ಸರ್ವೀಸ್‌‍ ರಸ್ತೆಯಿಂದ ಮುಖ್ಯ ಹೆಬ್ಬಾಳ ಕಾಲುವೆಗೆ ಸಂಪರ್ಕ ಕಲ್ಪಿಸುವ 1.6 ಕಿ.ಮೀ. ಉದ್ದದ ಮಾನವ ನಿರ್ಮಿತ ಕಾಲುವೆ ನಿರ್ಮಿಸಲಾಗಿದೆ. ಇದರ ಮೂಲಕ ಮಳೆನೀರು ಮುಖ್ಯ ಕಾಲುವೆಯತ್ತ ಹರಿಯಲು ವ್ಯವಸ್ಥೆ ಮಾಡಲಾಗಿದೆ.

ಸೆ.30ರಂದು ಸುರಿದ ಭಾರಿ ಮಳೆಯ ಸಂದರ್ಭ ಕಾರಿಯಣ್ಣಪಾಳ್ಯ ಹಾಗೂ ವೀರಣ್ಣಪಾಳ್ಯ ಹೊರವರ್ತುಲ ರಸ್ತೆಯಲ್ಲಿ ಪ್ರವಾಹ ಉಂಟಾಗದೆ, ಮಳೆನೀರು ಮುಖ್ಯ ಹೆಬ್ಬಾಳ ಕಾಲುವೆಯತ್ತ ಹರಿದುಹೋಗಿದೆ ಎಂದು ಪಾಲಿಕೆ ಹೇಳಿದೆ.

ಅಟ್ಟೂರು-ಪುಟ್ಟೇನಹಳ್ಳಿ ಭಾಗಕ್ಕೂ ಪರಿಹಾರ;
ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ನಲ್ಲಿ ಅನಂತಪುರ ಗ್ರಾಮದ ಕಡೆಯಿಂದ ಹರಿದುಬರುತ್ತಿದ್ದ ಕೊಳಚೆ ನೀರು ಹಾಗೂ ಮಳೆನೀರಿನಿಂದ ನೀರು ನಿಲುಗಡೆಯಾಗುತ್ತಿತ್ತು. ಖಾಸಗಿ ಆಸ್ತಿ ಮಾಲೀಕರ ಒಪ್ಪಿಗೆಯೊಂದಿಗೆ 145 ಮೀಟರ್‌ ಉದ್ದದ, 600 ಮಿ.ಮೀ. ವ್ಯಾಸದ 3 ಪೈಪ್‌ ಅಳವಡಿಸಿ ಡೈವರ್ಷನ್‌ ಡ್ರೈನ್‌ಗೆ ಸಂಪರ್ಕ ಕಲ್ಪಿಸಲಾಗಿದೆ.ಜತೆಗೆ, ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಅಡಿಯಲ್ಲಿ 60 ಮೀಟರ್‌ ಉದ್ದದ ಮಳೆನೀರು ಚರಂಡಿ ನಿರ್ಮಿಸಿ, ಅನಂತಪುರ ಮತ್ತು ಅಟ್ಟೂರು ಕ್ಯಾಚ್‌ಮೆಂಟ್‌‍ ಪ್ರದೇಶಗಳ ಮಳೆನೀರು ಪುಟ್ಟೇನಹಳ್ಳಿ ಕೆರೆಗೆ ಹರಿಯುವಂತೆ ಮಾಡಲಾಗಿದೆ.

ಎಚ್‌ಬಿಆರ್‌ ಲೇಔಟ್‌ನಲ್ಲೂ ಹೊಸ ಚರಂಡಿ:
ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ನ 18ನೇ ಮುಖ್ಯರಸ್ತೆಯಲ್ಲಿ ಕಳೆದ 810 ವರ್ಷಗಳಿಂದ ಮಳೆನೀರು ಸರಾಗವಾಗಿ ಹರಿಯಲು ತೊಂದರೆಯಾಗಿತ್ತು. ಕಚೇರಿ ಸಮೀಪ ಹಾದುಹೋಗಿರುವ 1.5 ಮೀಟರ್‌ ವ್ಯಾಸದ ಪೈಪ್‌ಲೈನ್‌ನಿಂದಾಗಿ ಸಮಸ್ಯೆ ಉಂಟಾಗಿತ್ತು.ರಸ್ತೆಯ ಇಳಿಜಾರಿಗೆ ಅನುಗುಣವಾಗಿ ಹೊಸ ಕಲ್ವರ್ಟ್‌ ಹಾಗೂ ಚರಂಡಿ ನಿರ್ಮಿಸಿ ಸಮೀಪದ ಪ್ರಮುಖ ಮಳೆನೀರು ಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ನೀರು ನಿಲುಗಡೆಯ ಸಮಸ್ಯೆ ಪರಿಹಾರವಾಗಿದೆ.

ಸರ್ವಜ್ಞನಗರದಲ್ಲೂ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಿಯಮಿತವಾಗಿ ಕೈಗೊಳ್ಳಲಾಗುತ್ತಿದೆ.
ಟಾಟಾ ನಗರ, ಡೈನಸ್ಟಿ ಲೇಔಟ್‌ಗೆ ಮುನ್ನೆಚ್ಚರಿಕೆ2024ರ ಭಾರಿ ಮಳೆಯಲ್ಲಿ ಟಾಟಾ ನಗರ, ಡೈನಸ್ಟಿ ಲೇಔಟ್‌ ಮತ್ತು ಡಿಫೆನ್‌್ಸ ಲೇಔಟ್‌ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಪ್ರವಾಹ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಹಾಗೂ ವಿಶ್ವಬ್ಯಾಂಕ್‌ ನೆರವಿನಿಂದ ಚರಂಡಿ ಉದ್ದಕ್ಕೂ ತಡೆಗೋಡೆ ನಿರ್ಮಿಸಲಾಗಿದೆ.

ಡೈನಸ್ಟಿ ಲೇಔಟ್‌ ತಗ್ಗು ಪ್ರದೇಶವಾಗಿರುವುದರಿಂದ ರಸ್ತೆ ಮೇಲಿನ ನೀರನ್ನು ಹೊರಹಾಕಲು ಎರಡು ನೆಲಮಟ್ಟದ ನೀರು ಸಂಗ್ರಹಣಾ ಕೊಳಗಳನ್ನು ನಿರ್ಮಿಸಿ, ಸ್ವಯಂಚಾಲಿತ ಸೆನ್ಸರ್‌ ಪಂಪ್‌ಗಳನ್ನು ಅಳವಡಿಸಲಾಗಿದೆ.ಇದಲ್ಲದೆ, ವಿವಿಧ ಪ್ರದೇಶಗಳಲ್ಲಿ ಕೆರೆಗಳಿಗೆ ಮಳೆನೀರು ಸಂಪರ್ಕ ಕಲ್ಪಿಸುವುದು, ಚರಂಡಿಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ತಡೆಗೋಡೆ ಹಾಗೂ -ಆಕಾರದ ಚರಂಡಿಗಳ ನಿರ್ಮಾಣ, ಅಗತ್ಯವಿರುವ ಕಡೆ ಕಿರಿದಾದ ಸೇತುವೆಗಳ ಬದಲಿಗೆ ಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ತಗ್ಗು ಪ್ರದೇಶಗಳಲ್ಲಿ ನೀರು ನಿಲುಗಡೆಯಾಗದಂತೆ ತಾಂತ್ರಿಕ ಪರಿಶೀಲನೆ ಆಧರಿಸಿ ವಿಶ್ವಬ್ಯಾಂಕ್‌ ನೆರವು, ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಹಾಗೂ ಪಾಲಿಕೆ ಅನುದಾನ ಬಳಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಅಯುಕ್ತರು ತಿಳಿಸಿದ್ದಾರೆ.

RELATED ARTICLES
spot_img

Latest News