ಬೆಂಗಳೂರು, ಅ.2- ಗಾಂಧಿ ಬಜಾರ್ನ ಬಹುಮಹಡಿ ವಾಹನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಮಳಿಗೆಗಳಿಗೆ ಬಾಡಿಗೆ ದರವನ್ನು ಏಕಾಏಕಿ ಹೆಚ್ಚಿಸಿ ಟೆಂಡರ್ ಆಹ್ವಾನಿಸಿರುವ ಕ್ರಮಕ್ಕೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗಾಂಧಿ ಬಜಾರ್ ಬಹುಮಹಡಿ ವಾಹನ ನಿಲ್ದಾಣದಲ್ಲಿರುವ ಮಳಿಗೆಗಳಿಗೆ ಪ್ರತಿ ಚದರ ಮೀಟರ್ಗೆ 6,453.46, ಅಂದರೆ ಪ್ರತಿ ಚದರ ಅಡಿಗೆ ಸುಮಾರು 599.55 ಬಾಡಿಗೆ ದರ ನಿಗದಿಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಗರಪಾಲಿಕೆಯ ಆದಾಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿಗಳಿಂದ ಹೆಚ್ಚಿನ ಆದಾಯ ಪಡೆಯುವ ಉದ್ದೇಶದಿಂದ ಬಾಡಿಗೆ ದರವನ್ನು ಹೆಚ್ಚಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸಣ್ಣ ವ್ಯಾಪಾರಿಗಳು ಅವಲಂಬಿಸಿರುವ ಮಳಿಗೆಗಳಿಗೆ ಇಷ್ಟು ಹೆಚ್ಚಿನ ಬಾಡಿಗೆ ದರ ನಿಗದಿಪಡಿಸಲು ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಬಿಎ ಹಾಗೂ ನಗರಪಾಲಿಕೆ ಅಧಿಕಾರಿಗಳಿಗೆ ಪತ್ರ ಸಲ್ಲಿಸಿರುವ ವ್ಯಾಪಾರಿಗಳು, ಬಾಡಿಗೆ ದರ ನಿಗದಿಗೆ ವೈಜ್ಞಾನಿಕ ಮತ್ತು ಕಾನೂನುಬದ್ಧ ಆಧಾರವೇನು, ಮಾರುಕಟ್ಟೆ ಮೌಲ್ಯಮಾಪನ ನಡೆಸಲಾಗಿದೆಯೇ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲಾಗಿದೆಯೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ? ಸಣ್ಣ ವ್ಯಾಪಾರಿಗಳು ಹಾಗೂ ಸಾಮಾನ್ಯ ಜನರು ಜೀವನೋಪಾಯಕ್ಕಾಗಿ ಈ ಮಳಿಗೆಗಳನ್ನು ಅವಲಂಬಿಸಿರುವ ಸಂದರ್ಭದಲ್ಲಿ ಹೆಚ್ಚಿನ ಬಾಡಿಗೆ ದರ ನಿಗದಿಪಡಿಸಿರುವುದು ಅವರ ಮೇಲೆ ನೇರ ಆರ್ಥಿಕ ಪರಿಣಾಮ ಬೀರಬಹುದು. ಹೀಗಾಗಿ ಸಾರ್ವಜನಿಕ ಆಸ್ತಿಗಳ ವಾಣಿಜ್ಯ ಬಳಕೆ ಹಾಗೂ ಬಾಡಿಗೆ ದರ ನಿಗದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಸಂವಿಧಾನದ ಅನುಚ್ಛೇದ 14ರಡಿ ಸಮಾನತೆ ಹಾಗೂ ನಿರಂಕುಶವಲ್ಲದ ಆಡಳಿತದ ತತ್ವಗಳನ್ನು ಪಾಲಿಸಬೇಕು. ಅನುಚ್ಛೇದ 19(1)() ನಾಗರಿಕರಿಗೆ ವ್ಯಾಪಾರ ನಡೆಸುವ ಸ್ವಾತಂತ್ರ್ಯವನ್ನು ಒದಗಿಸಿರುವ ಹಿನ್ನೆಲೆಯಲ್ಲಿ, ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುವ ಆಡಳಿತಾತ್ಮಕ ನಿರ್ಧಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ವ್ಯಾಪಾರಿಗಳು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಟೆಂಡರ್ ಸ್ಥಗಿತಕ್ಕೆ ಒತ್ತಾಯ:ಬಾಡಿಗೆ ದರ ನಿಗದಿ ಕುರಿತು ಸ್ವತಂತ್ರ ಹಾಗೂ ಸಮಗ್ರ ವಿಚಾರಣೆ ನಡೆಸಬೇಕು. ದರ ನಿಗದಿಗೆ ಆಧಾರವಾಗಿರುವ ಮೌಲ್ಯಮಾಪನ ವರದಿ, ಕಡತ ಟಿಪ್ಪಣಿಗಳು ಮತ್ತು ಅನುಮೋದನೆಗಳನ್ನು ಪರಿಶೀಲಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಅಗತ್ಯವಿದ್ದರೆ ಟೆಂಡರ್ ರದ್ದುಪಡಿಸಬೇಕು ಎಂದು ಮನವಿ ಮಾಡಲಾಗಿದೆ.
