Homeರಾಷ್ಟ್ರೀಯ174 ಜೀವ ಉಳಿಸಿದ 'ರಿಯಲ್ ಹೀರೋ' ಕ್ಯಾಪ್ಟನ್‌ ಸ್ಮಿತ್ ಜೊತೆ ಪ್ರಧಾನಿ ಮೋದಿ ಮಾತುಕತೆ

174 ಜೀವ ಉಳಿಸಿದ ‘ರಿಯಲ್ ಹೀರೋ’ ಕ್ಯಾಪ್ಟನ್‌ ಸ್ಮಿತ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಅ.2: ದುಬೈಯಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಭೀಕರ ಕಾಕ್‌ಪಿಟ್‌ ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕರೆ ಮೂಲಕ ಮಾತನಾಡಿದರು.ಈ ವೇಳೆ ಮಚ್ಚರ್‌ ಅವರ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಪ್ರಧಾನಿ ಶ್ಲಾಘಿಸಿ, ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು.

ಯುಎಇಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್‌ ಮಚ್ಚರ್‌, ಪ್ರಧಾನಿಯೊಂದಿಗಿನ ಸಂಭಾಷಣೆ ವೇಳೆ ಘಟನೆಯ ಭೀಕರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭಗಳಲ್ಲಿ ಧೈರ್ಯ ನೀಡಲು ತಾವು ಹನುಮಾನ್‌ ಚಾಲೀಸಾ ಪಠಿಸುವುದಾಗಿ ಅವರು ಪ್ರಧಾನಿಗೆ ತಿಳಿಸಿದ್ದಾರೆ. ಮಾತುಕತೆ ವೇಳೆ ಅವರು ಭಾವುಕರಾಗಿದ್ದು, ಪ್ರಧಾನಿಯೊಂದಿಗೆ ಮಾತನಾಡುವ ಅವಕಾಶ ದೊರೆತಿರುವುದು ತಮಗೆ ವಿಶೇಷ ಕ್ಷಣ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಮಚ್ಚರ್‌ ಅವರ ತಾಯಿ ಗೀತಾ ಬೆನ್‌ ಬಗ್ಗೆಯೂ ವಿಚಾರಿಸಿದರು. ತಾಯಿ ನೀಡಿದ ಸಂಸ್ಕಾರ ಮತ್ತು ಭಗವದ್ಗೀತೆಯ ಮೌಲ್ಯಗಳು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪಾತ್ರವಹಿಸಿವೆ ಎಂಬ ರೀತಿಯಲ್ಲಿ ಪ್ರಧಾನಿ ಮಾತನಾಡಿದರು. ತೀವ್ರ ಸಂಕಷ್ಟದ ನಡುವೆಯೂ ಇತರರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಮಚ್ಚರ್‌ ಅವರ ಸಾಹಸ ದೇಶ ಹೆಮ್ಮೆಪಡುವ ಸಂಗತಿ ಎಂದು ಪ್ರಧಾನಿ ಹೇಳಿದ್ದಾರೆ.

ಘಟನೆ ನಡೆದ ಬಳಿಕವೇ ಪ್ರಧಾನಿ ಮೋದಿ ಅವರು ಕ್ಯಾಪ್ಟನ್‌ ಮಚ್ಚರ್‌ ಅವರ ಧೈರ್ಯವನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದರು. ಅಕ್ಟೋಬರ್‌ 1ರಂದು ಯುಪಿಎಸ್‌ಸಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ತಮ್ಮ ಜೀವದ ಬಗ್ಗೆ ಭಯಪಡದೆ ಮಚ್ಚರ್‌ ಹೋರಾಡಿ ದೊಡ್ಡ ದುರಂತವನ್ನು ತಪ್ಪಿಸಲು ನೆರವಾದರು ಎಂದು ಹೇಳಿದರು.

140 ಕೋಟಿ ಭಾರತೀಯರು ಅವರ ಸಾಹಸಕ್ಕೆ ನಮಸ್ಕರಿಸುತ್ತಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದಿದ್ದರು. ಅದೇ ದಿನ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯಲ್ಲೂ ಗಂಭೀರವಾಗಿ ಗಾಯಗೊಂಡಿದ್ದರೂ ಇತರರ ಜೀವ ರಕ್ಷಿಸಲು ಮಚ್ಚರ್‌ ತೋರಿದ ಧೈರ್ಯ ಮತ್ತು ದೃಢನಿಶ್ಚಯವನ್ನು ಮೋದಿ ಶ್ಲಾಘಿಸಿದ್ದರು. ಅವರ ಸಾಹಸದಿಂದ ನೂರಾರು ಜೀವಗಳು ಉಳಿದಿವೆ ಮತ್ತು ದೊಡ್ಡ ದುರಂತವೊಂದು ತಪ್ಪಿದೆ. ಮಚ್ಚರ್‌ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು.

RELATED ARTICLES
spot_img

Latest News