ಬೆಂಗಳೂರು,ಅ.2-ಹಳೆ ದ್ವೇಷದಿಂದ ಸಾರ್ವಜನಿಕರ ಮೇಲೆ ಮನಬಂದಂತೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ದಂಪತಿ ಸೇರಿದಂತೆ 11 ಮಂದಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನ ಬೇಂದ್ರೆನಗರದ ನಿವಾಸಿ ಮಣಿಕಂಠ ಅಲಿಯಾಸ್ ಮಣಿ (27) ಈತನ ಪತ್ನಿ ಕೀರ್ತನಾ (21) ಹಾಗೂ ಉತ್ತರಹಳ್ಳಿಯ ಗೌಡನಪಾಳ್ಯದ ಪ್ರೇಮ್ (19, ಮನೋಜ್ ಅಲಿಯಾಸ್ ಮನು (20), ದೊಡ್ಡಗೌಡನಪಾಳ್ಯದ ಕೃಷ್ಣಗುಪ್ತ (19), ದರ್ಶನ್ (23), ಆಕಾಶ್(23), ಮಿನಾಜ್‌ನಗರದ ಮುನ್ನಾ (29), ಚಿಕ್ಕಲಸಂದ್ರದ ಮಧುಸೂದನ್ (24), ರಾಮನಗರ ಮೂಲದ ಸುದೀಪ (25), ಅರೆಹಳ್ಳಿಯ ಭರತ್ (22) ಬಂಧಿತರು.
ಉತ್ತರಹಳ್ಳಿ ಮಾರಮ ದೇವಸ್ಥಾನ ರಸ್ತೆ 6ನೇ ಕ್ರಾಸ್‌ನಲ್ಲಿರುವ ಖಾಲಿ ಜಾಗದಲ್ಲಿ ಕಿರಣ್‌ಕುಮಾರ್ ಎಂಬುವವರು ಸ್ನೇಹಿತರೊಂದಿಗೆ ನಿಂತಿದ್ದಾಗ ಆರೇಳು ಮಂದಿ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸ್ಯಾಂಡಿ ಎಲ್ಲಿ ಎಂದು ಕೇಳಿದ್ದಾರೆ. ಕಿರಣ್‌ಕುಮಾರ್ ಅವರು ತಮಗೆ ಗೊತ್ತಿಲ್ಲವೆಂದು ಹೇಳುತ್ತಿದ್ದಂತೆ ಏಕಾಏಕಿ ಡ್ರ್ಯಾಗರ್ ಮತ್ತು ಲಾಂಗ್‌ನಿಂದ ಕೈ ,ತಲೆ,ಭುಜ ಹಾಗೂ ಇನ್ನಿತರ ಭಾಗಗಳಿಗೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ.
ಅಲ್ಲದೇ ಸ್ನೇಹಿತ ಕಿರಣ್ ಎಂಬುವವರ ಮೇಲೆಯೂ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ಗ್ಯಾಂಗ್‌ನ ಮೂರ್ನಾಲ್ಕು ಮಂದಿ ಬೈಕ್‌ನಲ್ಲಿ ಉತ್ತರಹಳ್ಳಿ ಮುಖ್ಯ ರಸ್ತೆಯ ಅರೆಹಳ್ಳಿ ಆರ್ಚ್ ಬಳಿಯ ಬಿಆರ್‌ಎಂ ಫಿಶ್ ತವಾ ಫ್ರೈ ಅಂಗಡಿ ಮುಂಭಾಗ ಬಂದು ಮೀನು ಸೇವಿಸುತ್ತಿದ್ದವರ ಮೇಲೆ ಏಕಾಏಕಿ ಲಾಂಗ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದೆ.
ಹಲ್ಲೆ ತಡೆಯಲು ಮಧ್ಯಪ್ರವೇಶಿಸಿದ ಪಿರ್ಯಾದಿಯ ಸಹೋದರ ಬಾಲಸುಬ್ರಮಣ್ಯಂ ಎಂಬುವವರ ಮಗ ರವಿನಂದನ್ ಮೇಲೆಯೂ ರಾಡ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದೆ.ಈ ಘಟನೆ ಬಗ್ಗೆ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು.
ತನಿಖೆ ವೇಳೆ ಈ ಎರಡು ಪ್ರಕರಣಗಳಲ್ಲೂ ಒಂದೇ ಗ್ಯಾಂಗ್ ನಡೆಸಿರುವ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.ಆರೋಪಿಗಳ ಪತ್ತೆಗಾಗಿ ನೈರುತ್ಯ ವಿಭಾಗದ ಉಪಪೊಲೀಸ್ ಆಯುಕ್ತರಾದ ಸೌಮ್ಯಲತಾ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಗೋಪಾಲ್ ಡಿ.ಜೋಗಿನ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ತಾಂತ್ರಿಕ ಕೌಶಲ್ಯದಿಂದ ಮಾಹಿತಿ ಸಂಗ್ರಹಿಸಿ 11 ಮಂದಿಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕ್ರಿಕೆಟ್ ಆಡುವಾಗ ಹಲ್ಲೆಗೊಳಗಾದವರ ಜೊತೆ ಜಗಳವಾಗಿದೆ. ಆ ವಿಚಾರವಾಗಿ ದ್ವೇಷದಿಂದ ಈ ಕೃತ್ಯ ವ್ಯಸಗಿದ್ದಾಗಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಅಂಗಡಿಗೆ ಬಂದು ಹೋಗುತ್ತಿದ್ದ ಬಗ್ಗೆ ಮಾಹಿತಿ ನೀಡದ ಕೀರ್ತನಾ ಎಂಬ ಮಹಿಳೆಯನ್ನೂ ಸಹ ಬಂಧಿಸಲಾಗಿದ್ದು ತನಿಖೆ ಮುಂದುವರೆದಿದೆ.
